ಶೀನಾ ಬೋರಾ ಕೊಲೆ ಪ್ರಕರಣ ಸಿಬಿಐ ತನಿಖೆಗೆ
ಮುಂಬೈ, ಸೆಪ್ಟೆಂಬರ್ 19 : ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿರುವ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ ಶೀನಾ ಬೋರಾ ಪ್ರಕರಣದ ತನಿಖೆಯ ನೇತೃತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ? ಎಂದು ಮಾಹಿತಿ ನೀಡಲು ಮಹಾರಾಷ್ಟ್ರ ರಾಜ್ಯದ ಗೃಹ ಕಾರ್ಯದರ್ಶಿ ಕೆ.ಪಿ. ಭಕ್ಷಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಬಿಐ ತನಿಖೆಯ ಬಗ್ಗೆ ಮಾಹಿತಿ ನೀಡಲಾಗಿದೆ. [ಶೀನಾ ಬೋರಾ ಕೇಸ್ ತನಿಖಾಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ]

ಶೀನಾ ಬೋರಾ ಪ್ರಕರಣವು ಕೇವಲ ಕೊಲೆ ಪ್ರಕರಣ ಮಾತ್ರವಾಗಿಲ್ಲ. ಹಣಕಾಸಿನ ವಿಚಾರಗಳು ಇದರಲ್ಲಿ ಅಡಗಿವೆ. ಆದ್ದರಿಂದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ)ಗೆ ಒಪ್ಪಿಸಲಾಗುತ್ತಿದೆ ಎಂದು ಮಹಾರಾಷ್ಟ್ರಾ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. [ಶೀನಾ ಬೋರಾ DNA ಪರೀಕ್ಷೆ ವರದಿ ಬಹಿರಂಗ]
'ರಾಕೇಶ್ ಮಾರಿಯಾ ವರ್ಗಾವಣೆಯು ಒಂದು ನಿಗದಿತ ಪ್ರಕ್ರಿಯೆಯಾಗಿದ್ದು, ಇದಕ್ಕೂ ಅವರು ಶೀನಾ ಬೋರಾ ಪ್ರಕರಣದಲ್ಲಿ ಚುರುಕಿನ ತನಿಖೆ ನಡೆಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಕೆ.ಪಿ. ಭಕ್ಷಿ ಅವರು ಸ್ಪಷ್ಟ ಪಡಿಸಿದ್ದಾರೆ.
2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications