ನಟಿ ಮಾಧುರಿಗೆ ಬೆದರಿಸಿದ 'ಪ್ರವೀಣ' ಬಲೆಗೆ
ಮುಂಬೈ, ಡಿ.5: ಹಿಂದಿ ಚಿತ್ರರಂಗದ ಹೆಸರಾಂತ ನಟಿ ಮಾಧುರಿ ದೀಕ್ಷಿತ್ ಅವರ ಮೊಬೈಲ್ ಫೋನ್ ಗೆ ಬೆದರಿಕೆ ಸಂದೇಶಗಳನ್ನು ಕಳಿಸುತ್ತಿದ್ದ ಪ್ರವೀಣ್ ಎಂಬ ಯುವಕನೊಬ್ಬನನ್ನು ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಮಾಧುರಿ ದೀಕ್ಷಿತ್ ಅವರ ಮೊಬೈಲ್ ಫೋನ್ ಗೆ ಇತ್ತೀಚೆಗೆ ಬೆದರಿಕೆ ಸಂದೇಶಗಳು ಬರತೊಡಗಿತ್ತು. ದ್ವೇಷಪೂರಿತ ಸಂದೇಶಗಳ ಜೊತೆಗೆ ಕೊಲೆ ಬೆದರಿಕೆ ಸಂದೇಶವೂ ಇತ್ತು. ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲೆಗೈಯುತ್ತೇನೆ ಎಂಬ ಮೆಸೇಜ್ ನೋಡಿ ಕಂಗಾಲಾದ ಮೋಹಕ ನಗುವಿನ ಬೆಡಗಿ ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಛತ್ತೀಸ್ಗಡ ಮೂಲದವನಾದ ಪ್ರವೀಣ್ ಕುಮಾರ್ ಪ್ರಧಾನ್ ನನ್ನು ಬಂಧಿಸಲಾಗಿದ್ದು, ಈತ ಛೋಟಾ ರಾಜನ್ ಗುಂಪಿನ ಸದಸ್ಯ ಎಂಬ ಅಂಶ ಬೆಳಕಿಗೆ ಬಂದಿದೆ. ವಿಚಾರಣೆ ಜಾರಿಯಲ್ಲಿದೆ.

ನ.25ರಂದು ಮೊದಲ ಸಂದೇಶ ಬಂದಾಗ ಮಾಧುರಿ ದೀಕ್ಷಿತ್ ನಿರ್ಲಕ್ಷಿಸಿದ್ದಾರೆ. ಅದರೆ, ಮುಂದಿನ ಮೂರು ದಿನಗಳಲ್ಲಿ ಮತ್ತೆ ಮತ್ತೆ ಅದೇ ರೀತಿ ಸಂದೇಶ ಬಂದಾಗ ಕಂಗಾಲಾಗಿದ್ದಾರೆ. ಮಾಧುರಿ ಅವರ ಆಪ್ತ ಸಹಾಯಕರೊಬ್ಬರು ಈ ವಿಷಯವನ್ನು ನ.28ರಂದು ಮುಂಬೈನ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆದರಿಕೆಗಾರ ಸಿಕ್ಕಿಬಿದ್ದ: 23 ವರ್ಷ ವಯಸ್ಸಿನ ಪ್ರವೀಣ್ ಕುಮಾರ್ ಪ್ರಧಾನ್ ವೃತ್ತಿಯಲ್ಲಿ ಹೋಟೆಲ್ ವೊಂದರಲ್ಲಿ ಮಾಣಿಯಾಗಿದ್ದಾನೆ. ಮಾಧುರಿ ಅವರಿಗೆ ಬೆದರಿಕೆ ಒಡ್ಡಿ ಹಣ ಗಳಿಸಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಮುಂಬೈ ಪೊಲೀಸರ ವಿಚಾರಣೆ ಬಳಿಕ ಈತ ತನಗೆ ಭೂಗತ ಜಗತ್ತಿನ ಜೊತೆ ನಿರಂತರ ಸಂಬಂಧವಿದೆ. ಇದೇ ರೀತಿ ಹಲವು ನಿರ್ಮಾಪಕ, ನಟ, ನಟಿಯರಿಗೆ ಬೆದರಿಕೆ ಸಂದೇಶ ಕಳಿಸಿದ್ದಾಗಿ ಹೇಳಿದ್ದಾನೆ.
ಡಿ.3ರಂದು ಈತನನ್ನು ಬಂಧಿಸಿದ ಕ್ರೈಂ ಬ್ರಾಂಚ್ ಪೂಲೀಸರು ಮರುದಿನ ಕೋರ್ಟಿಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಧುರಿ ಅವರಿಗೆ ಕಳಿಸಿದ ಸಂದೇಶವೊಂದರಲ್ಲಿ ತಾನು ಛೋಟಾ ರಾಜನ್ ಅವರ ಬಂಟ ಎಂದು ಹೇಳಿಕೊಂಡಿದ್ದಾನೆ. 15 ವರ್ಷ ವಯಸ್ಸಿನ ಯುವಕನೊಬ್ಬನಿಗೆ ಆಯುಧ ಬಳಕೆ, ಬಾಂಬ್ ಬಳಕೆ ತರಬೇತಿ ನೀಡಿದ್ದೇನೆ. ಅವನು ನಿಮ್ಮ ಮನೆಗೆ ಬಂದು ದುಡ್ಡು ಪಡೆದುಕೊಳ್ಳುತ್ತಾನೆ ಎಂದು ಮಾಧುರಿ ಅವರಿಗೆ ಸಂದೇಶ ಕಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications