ಶಾರುಖ್‌ಗೆ ಬಿಗ್ ರಿಲೀಫ್: ಆರ್ಯನ್ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದ NCB
ಮುಂಬೈ ಮಾರ್ಚ್ 02: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಪ್ರಕರಣ ತನಿಖೆಯಲ್ಲಿದೆ. ಈ ಮಧ್ಯೆ ಆಶ್ಚರ್ಯಕರ ವರದಿಯೊಂದು ಹೊರಬಿದ್ದಿದೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಡ್ರಗ್ಸ್ ದಂಧೆಯಲ್ಲಿ ಆರ್ಯನ್ ಖಾನ್ ಭಾಗಿಯಾಗಿರುವ ಬಗ್ಗೆ ತನಿಖಾ ಸಂಸ್ಥೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಇದೊಂದು ಪಿತೂರಿ ಎಂದು ವರದಿ ಹೇಳಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಬಿಡುಗಡೆಯಾಗಿರುವ ಬಾಲಿವುಡ್ ಕಿಂಗ್ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ನಡೆಸಿದ ಎನ್‌ಸಿಬಿ ತಂಡ ವರದಿ ಪ್ರಕಟಿಸಲಿದ್ದು, ಅದರಲ್ಲಿ ಶಾರೂಖ್ ಪುತ್ರ ಆರ್ಯನ್ ಖಾನ್ರಿಗೆ ಕ್ಲೀನ್ಚಿಟ್ ನೀಡಿದೆ ಎನ್ನಲಾಗುತ್ತಿದೆ.ಅಲ್ಲದೇ, ದಾಳಿ ವೇಳೆ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ನ ಭಾಗವಾಗಿದ್ದರು ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಲ್ಲಿದೆ ಎಂದು ಹೇಳಲಾಗಿದೆ. ಹೀಗಾಗಿ ಆರ್ಯನ್ ಖಾನ್ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರಲಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಮತ್ತು ಎನ್‌ಸಿಬಿಯ ಡಿಡಿಜಿ ಸಂಜಯ್ ಸಿಂಗ್, ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಇನ್ನೂ ತನಿಖೆ ನಡೆಯುತ್ತಿದ್ದು, ಹಲವು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಇಲ್ಲಿಯವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳನ್ನು ಕಂಡುಕೊಂಡಿಲ್ಲ ಮತ್ತು ಅಂತರರಾಷ್ಟ್ರೀಯ ಡ್ರಗ್ಸ್ ದಂಧೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೊರಬಂದ ಸುದ್ದಿ ಗಮನಿಸಬೇಕಾದ ಸಂಗತಿ. ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಳ್ಳುವ ಅಥವಾ ಅವರ ಚಾಟ್ ಓದುವ ಅಗತ್ಯವಿಲ್ಲ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಆದರೆ ಈ ಹಿಂದೆ ಇದೇ ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ಆರ್ಯನ್ ಖಾನ್ ಭಾಗಿಯಾಗಿದ್ದಾರೆನ್ನುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿತ್ತು. ಇದರಲ್ಲಿ ಆರ್ಯನ್ ಖಾನ್ ಮೊಬೈಲ್ ಚಾಟ್ ಆರ್ಯನ್ ಖಾನ್ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನುವ ಆಧಾರಗಳನ್ನು ನೀಡಿತ್ತು ಎನ್ನಲಾಗುತ್ತದೆ.
ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದ ಸಮೀರ್ ವಾಂಖೆಡೆ ಮೇಲೆ ವೈಯಕ್ತಿ ಆರೋಗಳು, ಪ್ರಕರಣ ಮುಚ್ಚಿಹಾಕಲು ಲಂಚ ಪಡೆದಿದ್ದಾರೆನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ ಇದು ಆಧಾರ ರಹಿತ ಎಂದು ಸಮೀರ್ ವಾಂಖೆಡೆ ಹೇಳಿಕೊಂಡಿದ್ದರು. ತಮ್ಮ ಮೇಲಿನ ಆರೋಪಗಳನ್ನು ತನಿಖೆಗೆ ಒತ್ತಾಯಿಸಿ ಕೋರ್ಟ್ ಮೆಟ್ಟಿಲು ಕೂಡ ಅವರು ಏರಿದ್ದರು.
ಮುಂಬೈ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‌ಸಿಬಿಯ ಪ್ರಮುಖ ಸಾಕ್ಷಿ ಆರೋಪಿಸಿದ ನಂತರ ಈ ಹೈ ಪ್ರೊಫೈಲ್ ಪ್ರಕರಣ ವಿವಾದಕ್ಕೆ ಒಳಗಾಯಿತು. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು 25 ಕೋಟಿ ರೂ. ಹಣದ ಬೇಡಿಕೆಯಲ್ಲಿ ಎಂಟು ಕೋಟಿ ಹಣ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಸೇರದಿಲೆ ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಸರಳ ಕಾಗದದ ಮೇಲೆ ಸಹಿ ಹಾಕುವಂತೆ ಬಲವಂತವಾಗಿ ಕೇಳಲಾಯಿತು ಎಂದು ಸಾಕ್ಷಿ ಆರೋಪಿಸಿದ್ದಾರೆ. ಆದರೀಗ ಆರ್ಯನ್ ಖಾನ್ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ಎನ್‌ಸಿಬಿ ಹೇಳಿಕೊಂಡಿದೆ.
ಇನ್ನೂ ಅದರ ನಡುವೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯ ನಿರ್ದೇಶಕರಾಗಿದ್ದ, ಒಂದಷ್ಟು ವಿವಾದದ ಸುಳಿಗೆ ಸಿಲುಕಿದ್ದ ಖಡಕ್ ಐಆರ್ಎಸ್ ಅಧಿಕಾರಿ ಸಮೀರ್ ವಾಂಖೆಡೆಯವರ ಆಡಳಿತ ಅವಧಿ ಎನ್ಸಿಬಿಯಲ್ಲಿ ಮುಕ್ತಾಯವಾಗಿ (ಎನ್ಸಿಬಿಯಲ್ಲಿ ವಾಂಖೆಡೆ ಅಧಿಕಾರ ಅವಧಿ 2021ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡಿದೆ) ಇಲ್ಲಿ ಅವಧಿ ವಿಸ್ತರಣೆ ಮಾಡಿಕೊಡುವಂತೆ ಅವರು ಯಾವುದೇ ಮನವಿ ಸಲ್ಲಿಸದ ಕಾರಣ ಅವರಿಗೆ ಹುದ್ದೆಯಿಂದ ಮುಕ್ತಿ ನೀಡಲಾಯಿತು.












Click it and Unblock the Notifications