ಮಂಗಳೂರು: ಕುಣಿಯುತ್ತಿರುವಾಗಲೇ ಆಯತಪ್ಪಿ ಬಿದ್ದ ಹುಲಿವೇಷಧಾರಿ
ಮಂಗಳೂರು, ಅಕ್ಟೋಬರ್, 24: ಹುಲಿವೇಷ ಹಾಕಿಕೊಂಡು ಕುಣಿಯುತ್ತಿರುವಾಗಲೇ ಹುಲಿವೇಷಧಾರಿಯೊಬ್ಬ ಆಯತಪ್ಪಿ ಬಿದ್ದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳೂರಿನ ಶ್ರೀವಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ.
ಮಂಗಳಾದೇವಿಯ ಮುಳಿಹಿತ್ಲುವಿನ ಎಂಎಫ್‌ಸಿ ಹುಲಿವೇಷ ತಂಡದ ಹುಲಿವೇಷಧಾರಿ ಶಂಕರ್ ಎಂಬ ಯುವಕ ಹರಕೆಯ ಹಿನ್ನೆಲೆ ಶ್ರೀ ಮಂಗಳಾದೇವಿ ದೇವಸ್ಥಾನದ ಎದುರು ಹುಲಿವೇಷ ಹಾಕಿಕೊಂಡು ಕುಣಿಯುತ್ತಿದ್ದರು. ಈ ವೇಳೆ ಜಿಮ್ನ್ಯಾಸ್ಟಿಕ್ ಮಾಡುತ್ತಿದ್ದರು. ಈ ವೇಳೆ ಅವರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ತಲೆ ನೆಲಕ್ಕೆ ಬಡಿದಿದಿದೆ.

ತಲೆ ನೆಲಕ್ಕೆ ಬಡಿದ ಪರಿಣಾಮ ಹುಲಿವೇಷಧಾರಿ ಶಂಕರ್ ಕತ್ತು ಉಳುಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯದೊಂದಿಗೆ ಅಪಾಯದಿಂದ ಯುವಕ ಶಂಕರ್ ಪಾರಾಗಿದ್ದಾರೆ. ಅವರು ಆಯತಪ್ಪಿ ಬೀಳುತ್ತಿರುವ ವೀಡಿಯೋ ವೈರಲ್ ಆಗಿ ದೊಡ್ಡ ಏಟಾಗಿದೆ ಎಂದು ಪ್ರಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ಶಂಕರ್ ಅವರೇ ವೀಡಿಯೋ ಮಾಡಿ ನನಗೆ ಏನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗಮನ ಸೆಳೆದ ಹುಲಿ ನೃತ್ಯ ಸ್ಪರ್ಧೆ
ಹುಲಿವೇಷವೆಂದರೆ ಎಲ್ಲರಿಗೂ ಕ್ರೇಜ್. ಮನೆಮನೆ, ಅಂಗಡಿ ಬೀದಿಗಳನ್ನು ಸುತ್ತಿ ಬ್ಯಾಂಡ್, ತಾಸೆಗಳ ಸೌಂಡ್‌ಗಳಿಗೆ ಸ್ಟೆಪ್ ಹಾಕುತ್ತಿದ್ದ ಹುಲಿವೇಷಕ್ಕೆ ಇತ್ತೀಚೆಗೆ ಭರ್ಜರಿ ವೇದಿಕೆಗಳು ಸೃಷ್ಟಿಯಾಗಿದೆ. ಈ ಮೂಲಕ ಹುಲಿವೇಷಗಳ ನಡುವೆ ಪಂಥ ನಡೆದು ಲಕ್ಷಾಂತರ ಮೊತ್ತದ ಬಹುಮಾನ ಇರುತ್ತದೆ. ಮೊನ್ನೆಯಷ್ಟೇ ನಗರದ ನೆಹರೂ ಮೈದಾನದಲ್ಲಿ ನಡೆದ ಪಿಲಿಪರ್ಬದ ಪಂಥದಲ್ಲೂ ಕುಡ್ಲದ ಹುಲಿಗಳು ಭರ್ಜರಿ ನೃತ್ಯ ಪ್ರದರ್ಶಿಸಿ ಅಬ್ಬರಿಸಿತು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜನೆಗೊಂಡ ದ್ವಿತೀಯ ವರ್ಷದ "ಕುಡ್ಲದ ಪಿಲಿಪರ್ಬ-2023" ದಲ್ಲಿ ಹುಲಿವೇಷ ಸ್ಪರ್ಧಾಕೂಟ ನಡೆಯಿತು. ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪಿಲಿಪರ್ಬ ನಡೆಯಿತು. ಕರಾವಳಿಯ ಜನಪ್ರಿಯ 15 ಹುಲಿವೇಷ ತಂಡಗಳು ಈ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ವಿವಿಧ ಕಸರತ್ತು ಪ್ರದರ್ಶಿಸಿತು. ಜಿಲ್ಲೆಯ ಅತ್ಯಂತ ಪರಿಣಿತ ಆರು ಮಂದಿ ತೀರ್ಪುಗಾರರ ಸಮ್ಮುಖದಲ್ಲಿ, ಇಡೀ ದಿನ ಕಡಲನಗರಿ ಹುಲಿವೇಷಧಾರಿಗಳ ಭರ್ಜರಿ ಘರ್ಜನೆಗೆ ಸಾಕ್ಷಿಯಾಯಿತು.
ಪ್ರತೀ ಹುಲಿವೇಷ ತಂಡಗಳು ಮೆರವಣಿಗೆಯ ಮೂಲಕ ವೇದಿಕೆ ಪ್ರವೇಶಿಸಿ, 20 ನಿಮಿಷಗಳ ಕಾಲ ಪ್ರದರ್ಶನ ನೀಡಿತು. ಪ್ರತಿ ತಂಡವೂ 38 ಕೆ.ಜಿ. ಭಾರದ ಅಕ್ಕಿಮುಡಿ ಹಾರಿಸಿತು. ಕರಿಹುಲಿ, ಮರಿಹುಲಿ, ತಾಯಿ ಹುಲಿ, ಪಟ್ಟೆಹುಲಿ, ಚಿಟ್ಟೆ ಹುಲಿ ಹೀಗೆ ವೈವಿಧ್ಯಮಯ ಹುಲಿವೇಷಗಳು, ಭರ್ಜರಿ ತಾಸೆ - ಬ್ಯಾಂಡಿನ ಹಿಮ್ಮೇಳಕ್ಕೆ ಸಖತ್ ಸ್ಟೆಪ್ ಹಾಕಿತು.
ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಲು ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿತ್ತು. ಸ್ಕ್ರೀನ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸ್ಪರ್ಧಾಳುಗಳಿಗೆ ಲಕ್ಷಾಂತರ ರೂಪಾಯಿ ಮೊತ್ತದ ಬಹುಮಾನವೂ ಇತ್ತು. ಪಿಲಿ ಪರ್ಬ 2023ರ ಚಾಂಪಿಯನ್ ಪ್ರಶಸ್ತಿ ಯನ್ನು ಜಗದಾಂಬಿಕಾ ಟೈಗರ್ಸ್ ಮುಳಿಹಿತ್ಲು, ದ್ವಿತೀಯ ಬಹುಮಾನವನ್ನು ನಂದಿಗುಡ್ಡೆ ಫ್ರೆಂಡ್ಸ್ ಬಾಬುಗುಡ್ಡೆ ತಂಡ ಪಡೆಯಿತು.
ವೈಯುಕ್ತಿಕ ಪ್ರದರ್ಶನ, ಕಪ್ಪು ಹುಲಿ, ಉತ್ತಮ ಬಣ್ಣಗಾರಿಕೆ, ಉತ್ತಮ ತಾಸೆ ಸೇರಿದಂತೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗಿದೆ. ಮಧ್ಯರಾತ್ರಿ ತನಕ ನಡೆದ ಪಿಲಿಪರ್ಬವನ್ನು ಜನ ಮಿಸುಕಾಡದೇ ತದೇಕಚಿತ್ತದಿಂದ ನೋಡಿದ್ದು, ತುಳುನಾಡಿಗರಿಗೆ ಹುಲಿವೇಷದ ಮೇಲಿನ ಕ್ರೇಜ್ ಅನ್ನು ನಿರೂಪಿಸಿತು.
15 ತಂಡಗಳ ತೀವ್ರ ಜಿದ್ದಾಜಿದ್ದಿನ ಸ್ಪರ್ಧಾಕೂಟದಲ್ಲಿ ಅಂತಿಮವಾಗಿ, "ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಂಬಾ ಹುಲಿ" ತಂಡವು ಪಿಲಿಪರ್ಬ- 2023ರ ಕಿರೀಟ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ ತಂಡವು ಪಡೆದುಕೊಂಡರೆ, ಪುರಲ್ದಪ್ಪೆನ ಮೋಕೆದ ಬೊಲ್ಲಿಲು ಪೊಳಲಿ ಟೈಗರ್ಸ್ ತಂಡವು ತೃತೀಯ ಸ್ಥಾನವನ್ನು ಅಲಂಕರಿಸಿತು.
ಇನ್ನು ಪಿಲಿಪರ್ಬದ ವಿಶೇಷ ಬಹುಮಾನಗಳಾದ "ಕಪ್ಪು ಪಿಲಿ" ಪ್ರಶಸ್ತಿಯನ್ನು ಎಸ್.ಎಫ್.ಸಿ ಸೋಮೇಶ್ವರ ತಂಡ ಪಡೆದುಕೊಂಡರೆ, ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ತಂಡವು "ಮರಿ ಹುಲಿ" ಪ್ರಶಸ್ತಿಯನ್ನು, ಬಹು ನಿರೀಕ್ಷಿತ ಪ್ರಶಸ್ತಿಯಾದ "ಪರ್ಬದ ಪಿಲಿ"ಯನ್ನು ಮಂಗಳೂರ್ ಫ್ರೆಂಡ್ಸ್ ಟೈಗರ್ಸ್ ಮುಳುಹಿತ್ಲು ಪಡೆದುಕೊಂಡಿತು.
ಶಿಸ್ತಿನ ತಂಡವಾಗಿ ಶಿವಶಕ್ತಿ ಟೈಗರ್ ಕುಂಜತ್ತೂರು ಮಂಜೇಶ್ವರ ಹೊರ ಹೊಮ್ಮಿದರೆ, ಬಣ್ಣಗಾರಿಕೆಯಲ್ಲಿ ಎಸ್.ಕೆ.ಬಿ ಟೈಗರ್ಸ್ ಕುಂಪಲ ತಂಡವು ಹೆಚ್ಚುಗಾರಿಕೆ ಪಡೆಯಿತು. ಮುಡಿ ವಿಭಾಗದಲ್ಲಿ ವಿ.ಸಿ.ಎಸ್, ಮೂಡುಶೆಡ್ಡೆ (ವಿಷ್ಣು ಪಿಲಿಕುಲು) ಪ್ರಶಸ್ತಿ ಪಡೆದುಕೊಂಡರೆ, ಧರಣಿ ಮಂಡಲ ಹಾಗೂ ತಾಸೆ ವಿಭಾಗದಲ್ಲಿ ಯಂಗ್ ಬಾಯ್ಸ್ ಮುಳುಹಿತ್ಲು ಮಂಗಳಾದೇವಿ ಹುಲಿ ತಂಡ ಎರಡೂ ಪ್ರಶಸ್ತಿಗಳನ್ನು ಬಾಚಿಕೊಂಡಿತು.
ಕಾರ್ಯಕ್ರಮಕ್ಕೆ ವಿಶೇಷ ತಾರಾ ಮೆರುಗು ನೀಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ತುಳುನಾಡಿನ ಮಣ್ಣಿನ ಸೊಗಡನ್ನು ಇಡೀ ನಾಡಿಗೆ ಪಸರಿಸುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಕಾರ್ಯ ಗಮನಾರ್ಹವಾದುದು. ಅವರ ಶ್ರಮ ಹಾಗೂ ಉತ್ಸಾಹದಿಂದಲೇ ಈ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಡಿಸಿಪಿ ಅಂಶು ಕುಮಾರ್, ನಟರಾದ ವಸಿಷ್ಟ ಸಿಂಹ, ಅರ್ಜುನ್ ಕಾಪಿಕಾಡ್ ಸೇರಿದಂತೆ ಹಲವು ಗಣ್ಯರು ಹುಲಿಗಳ ಕುಣಿತವನ್ನು ವೀಕ್ಷಿಸಿದರು.












Click it and Unblock the Notifications