ದಕ್ಷಿಣ ಕನ್ನಡಕ್ಕೆ ಬರ್ತಾರಾ ಖಡಕ್ ಎಸ್‌ಪಿ ಅಣ್ಣಾಮಲೈ?
ಮಂಗಳೂರು, ಜೂನ್ 21: ಖಡಕ್ ಐಪಿಎಸ್ ಅಧಿಕಾರಿ ಎಂದೇ ಕರೆಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಅಣ್ಣಾಮಲೈಯವರನ್ನು ಶೀಘ್ರದಲ್ಲೇ ಜಿಲ್ಲೆಗೆ ವರ್ಗಾಯಿಸುತ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಆದರೆ ಇದನ್ನು ಸ್ವತಃ ಅಣ್ಣಾಮಲೈ ತಳ್ಳಿ ಹಾಕಿದ್ದು ಆ ರೀತಿಯ ಯಾವುದೇ ಸೂಚನೆಗಳು ಬಂದಿಲ್ಲ ಎಂದು ಹೇಳಿದ್ದಾರೆ.
ಅಣ್ಣಾಮಲೈ ಈ ಹಿಂದೆ ಉಡುಪಿಯಲ್ಲಿ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದರು. ಅಣ್ಣಾಮಲೈ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಆಗಿ ನೇಮಕಗೊಳಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸಂದೇಶ, ಬರಹಗಳು ಹರಿದಾಡುತ್ತಿವೆ.
ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಕೆಲ ಅಹಿತಕರ ಘಟನೆಗಳು ಮತೀಯ ಬಣ್ಣಕ್ಕೆ ತಿರುಗಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪಟ್ಟಣ ಉದ್ವಿಗ್ನಗೊಂಡಿತ್ತು. ಆದರೆ ಇದೀಗ ಉದ್ವಿಗ್ನತೆ ಮಾಯವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.
ಎಸ್ಪಿ ಬದಲಾವಣೆಗೆ ಕಾಂಗ್ರೆಸ್ ಚಿತ್ತ
ಕಲ್ಲಡ್ಕ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ಜಿಲ್ಲೆಯ ಆಡಳಿತ ಪಕ್ಷದ ನಾಯಕರು ಮಾತ್ರ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಬದಲಾವಣೆಯನ್ನು ಬಯಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ.

ರಮಾನಾಥ ರೈ ಶಿಫಾರಸ್ಸು?
ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸದ್ಯ ಚಿಕ್ಕಮಗಳೂರು ಎಸ್ಪಿ ಆಗಿರುವ ಅಣ್ಣಾಮಲೈರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸುವಂತೆ ಶಿಫಾರಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ರೈ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರಲ್ಲೂ ಮಾತನಾಡಿದ್ದಾರೆ ಎನ್ನಲಾಗಿದೆ.

ವೈರಲ್ ಆಗಿದ್ದ ವಿಡಿಯೋ
ಘಟನೆ ಸಂಬಂಧ ಹಿಂದೂ ಸಂಘಟನೆಗಳ ನಾಯಕರನ್ನು ಜಾಮೀನು ರಹಿತ ಸೆಕ್ಷನ್ನುಗಳಡಿಯಲ್ಲಿ ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಎಸ್ಪಿಗೆ ನಿರ್ದೇಶನ ನೀಡಿದ ಸಂಭಾಷಣೆಯ ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭೂಷಣ್ ಬೊರಾಸೆ ಕಾರ್ಯವೈಖರಿಗೆ ಅಸಮಧಾನ
ಕಲ್ಲಡ್ಕ ಘಟನೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ನಿಭಾಯಿಸಿದ ರೀತಿಯಿಂದ ರಾಜ್ಯ ಸರಕಾರ ಸಂತುಷ್ಟವಾಗಿಲ್ಲವೆಂದು ತಿಳಿದುಬಂದಿದೆ. ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಾಸೆ ಕಾರ್ಯವೈಖರಿಗೆ ಆಡಳಿತ ಪಕ್ಷದವರು ಅಪಸ್ವರ ಎತ್ತಿದ್ದಾರೆ.

ನನಗೆ ಸೂಚನೆ ಬಂದಿಲ್ಲ
"ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಆಗುವಂತೆ ನನಗೆ ಇದುವರೆಗೆ ಯಾರಿಂದಲೂ ಸೂಚನೆ ಬಂದಿಲ್ಲ' ಎಂದು ಖಡಕ್ ಐಪಿಎಸ್ ಅಧಿಕಾರಿ ಎಂದೇ ಕರೆಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಅಣ್ಣಾಮಲೈ ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications