ಏ.26ರಿಂದ ಕಾಸರಗೋಡು ತನಕ ವಂದೇ ಭಾರತ್ ರೈಲು, ಶೀಘ್ರವೇ ಮಂಗಳೂರಿಗೆ

ಮಂಗಳೂರು, ಏಪ್ರಿಲ್ 23; ಕರಾವಳಿ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ದೇಶದ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಸರಗೋಡು ತನಕ ಸಂಚಾರ ನಡೆಸಲಿದೆ. ಶೀಘ್ರದಲ್ಲೇ ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆಯಾಗಲಿದೆ.

ಕೇಂದ್ರ ಸರ್ಕಾರ ಕೇರಳ ರಾಜ್ಯಕ್ಕೆ ನೀಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ-ಕಾಸರಗೋಡು ನಡುವೆ ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳು ಏಪ್ರಿಲ್ 26ರಿಂದ ಸಂಚಾರ ನಡೆಸಲಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತದೆ.

Vande Bharat Express To Run Till Kasaragod From April 26th

ರೈಲ್ವೆ ಸಚಿವಾಲಯ ತಿರುವನಂತಪುರಂ-ಕಣ್ಣೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಿತ್ತು. ಬಳಿಕ ರಾಜ್ಯ ಸರ್ಕಾರದ ಬೇಡಿಕೆಯಂತೆ ಕರ್ನಾಟಕ-ಕೇರಳ ಗಡಿ ಭಾಗದ ಕಾಸರಗೋಡು ತನಕ ಅದನ್ನು ಓಡಿಸಲು ಒಪ್ಪಿಗೆ ನೀಡಿದೆ. ಮುಂದುವರೆದ ಭಾಗವಾಗಿ ರೈಲನ್ನು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ಓಡಿಸಲಾಗುತ್ತದೆ.

ಕರ್ನಾಟಕಕ್ಕೂ ಬರಲಿದೆ ರೈಲು; ಕೇರಳದ ಶಾಸಕರು, ಸಂಸದರು ವಂದೇ ಭಾರತ್ ರೈಲನ್ನು ಕಾಸರಗೋಡು ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಈ ಕುರಿತು ಮಾತನಾಡಿದ್ದು, ಸದ್ಯ ಕಾಸರಗೋಡು ತನಕ ರೈಲು ಓಡಲಿದೆ. ಕರ್ನಾಟಕದಲ್ಲಿ ಚುನಾವಣೆ ಮುಗಿದ ಬಳಿಕ ರೈಲು ಸೇವೆ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 25ರಂದು ತಿರುವನಂತಪುರ ಸೆಂಟ್ರಲ್ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆ ಮಾಡುವ ಶೆಡ್ ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಮಂಗಳೂರು ತನಕ ರೈಲು ಸಂಚಾರ ನಡೆಸಲಿದೆ.

Vande Bharat Express To Run Till Kasaragod From April 26th

2022ರ ನವೆಂಬರ್‌ನಲ್ಲಿ ನರೇಂದ್ರ ಮೋದಿ ಮೈಸೂರು ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೆ. ಎಸ್. ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದರು. ಮೈಸೂರು-ಚೆನ್ನೈ ರೈಲು ಬೆಂಗಳೂರು ಮೂಲಕ ಸಾಗಲಿದೆ. ಸದ್ಯ ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವ ಒಂದೇ ಒಂದು ವಂದೇ ಭಾರತ್ ರೈಲು ಇದಾಗಿದೆ.

ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುವುದಾಗಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಿ ವೇಗದ ಪರೀಕ್ಷೆಯನ್ನು ನಡೆಸಲಾಗಿದೆ. ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮೇ 30ರ ಬಳಿಕ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ರೈಲಿನ ವೇಳಾಪಟ್ಟಿ; ಏಪ್ರಿಲ್ 26ರಿಂದ ಕಾಸರಗೋಡಿನಿಂದ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ. ರೈಲು ನಂಬರ್ 20633 ಮಧ್ಯಾಹ್ನ 2.30ಕ್ಕೆ ಹೊರಟ ರಾತ್ರಿ 10.35ಕ್ಕೆ ತಿರುವನಂತಪುರಂ ಸೆಂಟ್ರಲ್ ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 20634 ತಿರುವನಂತಪುರಂ-ಕಾಸರಗೋಡು ರೈಲು ಏಪ್ರಿಲ್ 28ರಿಂದ ಸಂಚಾರ ನಡೆಸಲಿದೆ. ಬೆಳಗ್ಗೆ 5.20ಕ್ಕೆ ಹೊರಡುವ ರೈಲು ಮಧ್ಯಾಹ್ನ 1.25ಕ್ಕೆ ಕಾಸರಗೋಡು ತಲುಪಲಿದೆ. ಒಟ್ಟು 16 ಬೋಗಿಗಳನ್ನು ರೈಲು ಒಳಗೊಂಡಿದೆ.

ತಿರುವನಂತಪುರಂ-ಕಾಸರಗೋಡು ನಡುವಿನ ವಂದೇ ಭಾರತ್ ರೈಲು 586 ಕಿ. ಮೀ. ದೂರವನ್ನು 8.05 ಗಂಟೆಗಳಲ್ಲಿ ಕ್ರಮಿಸಲಿದೆ. ರೈಲು ಗಂಟೆಗೆ 73 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲಿದೆ. ಕಣ್ಣೂರು, ಕೊಯಿಕ್ಕೋಡ್, ಶೋರ್ನೂರ್, ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ, ಕೊಲ್ಲಂಗಳಲ್ಲಿ ಈ ರೈಲು ನಿಲುಗಡೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+