ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ
ಉಡುಪಿ, ಆಗಸ್ಟ್, 03 : ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‍ಮೆಂಟ್ ಬಂಟಕಲ್ ನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮ ವಿದ್ಯಾಲಯದ ಆವರಣದಲ್ಲಿ ಭಾನುವಾರ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ತಿರುವನಂತಪುರದ ವಿಕ್ರಮ ಸಾರಾಭಾಯ್ ಅಂತರಿಕ್ಷ ಕೇಂದ್ರ ಮತ್ತು ಭಾರತೀಯ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕರಾದ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ.ಎನ್ ಸುರೇಶ್ ಅವರು ಭಾಗವಹಿಸಿದ್ದರು.[ಹೊರದೇಶದ ವಿದ್ಯಾರ್ಥಿಗಳು ಹಣ ಉಳಿಸಲು ಏನು ಮಾಡಬೇಕು?]

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ವಿಜ್ಞಾನ ಜ್ಞಾನವನ್ನು ಹೆಚ್ಚಿಸಿದರೆ, ತಂತ್ರಜ್ಞಾನ ಜ್ಞಾನವನ್ನು ಅನ್ವಯಿಸಿ ಸಮಾಜ ಎದುರಿಸುವ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದರು.
ಪ್ರಸ್ತುತ ದೇಶದಲ್ಲಿ ಬಹಳ ಸಮಸ್ಯೆಗಳಿದ್ದು, ವಿದ್ಯಾರ್ಥಿಗಳು ಕುತೂಹಲ, ವೀಕ್ಷಣೆ ಮತ್ತು ನವೀನ ಚಿಂತನೆಗಳ ಲಕ್ಷಣಗಳನ್ನು ಒಳಗೊಂಡ ಶಾಶ್ವತ ಮತ್ತು ಸುಸ್ಥಿರವಾದ ಪರಿಹಾರ ಕಂಡುಕೊಳ್ಳಲು ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು. ಹಾಗೆಯೇ, ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಅಗತ್ಯವಾದ ಲಕ್ಷ್ಯವನ್ನು ನಿರ್ಮಿಸಿ, ಅದರೆಡೆಗೆ ಪಯಣಿಸಲು ತಮ್ಮೊಂದಿಗೆ ದೇಶವನ್ನೂ ಪ್ರಗತಿಯತ್ತ ಕೊಂಡೊಯ್ಯಬೇಕೆಂದು ನಿವೇದಿಸಿಕೊಂಡರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ರವಿಪ್ರಭಾರವರು ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತು ಮತ್ತು ನಿಯಮಾವಳಿಗಳನ್ನು ವಿವರಿಸಿದರು. ಪ್ರಥಮ ವರ್ಷದ ಬಿ.ಇ. ಕಾರ್ಯಕ್ರಮ ಸಂಯೋಜಕರಾದ ಡಾ. ಲೊಲಿಟಾ ಪ್ರಿಯ ಕ್ಯಾಸ್ಟಲಿನೋ ಅವರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಅಗತ್ಯವಾದ ಹಾಗೂ ಸ್ಪಷ್ಟವಾದ ಲಕ್ಷ್ಯವನ್ನು ನಿರ್ಮಿಸಿ, ಅದರೆಡೆಗೆ ಪಯಣಿಸಲು ಬೇಕಾದ ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡು, ತಮ್ಮೊಂದಿಗೆ ದೇಶವನ್ನೂ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ನಿವೇದಿಸಿಕೊಂಡರು.
ಇದೇ ಸಂದರ್ಭದಲ್ಲಿ 2011-15ನೇ ಶೈಕ್ಷಣಿಕ ವರ್ಷದ ಅಂತಿಮ ವರ್ಷದ ತರಗತಿಯ ಪರೀಕ್ಷೆಗಳಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಮತ್ತು ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.












Click it and Unblock the Notifications