ಪ್ರಧಾನಿ ಮೋದಿಗಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶ
ಮಂಗಳೂರು, ಜನವರಿ 14: ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಒಂದೆಡೆ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಹೋಮ, ಹವನ, ಯಾಗಾದಿಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಬಗ್ಗೆ ಹಾಗೂ ಅದರ ಲಾಭದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯತೊಡಗಿವೆ.
ಮಂಗಳೂರಿನಲ್ಲಿಯೂ ಮೋದಿ ಅವರಿಗಾಗಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಮಂಗಳೂರಿನ ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಮತ್ತು ಪಂಚಾಯತ್ ತಂಡದ ಜೊತೆ ಸೇರಿ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಎಂಬ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಚರ್ಚಿಸಲು ಮತ್ತು ಮೌಲ್ಯಮಾಪನ ಮಾಡಲು ಖ್ಯಾತ ಭಾಷಣಕಾರರನ್ನು ಕರೆಸಲು ತೀರ್ಮಾನಿಸಲಾಗಿದೆ.

ಜಿಎಸ್ ಟಿ ಮತ್ತು ನೋಟು ಅಮಾನ್ಯೀಕರಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮೋದಿಯವರ ರಾಜತಾಂತ್ರಿಕ ನಡೆ, ಆಯುಶ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಭಯೋತ್ಪಾದನೆ ವಿರುದ್ಧ ಹೋರಾಟ, ನಕ್ಸಲರು ಮತ್ತು ಎನ್‍ಜಿಓ ಹಾಗೂ ಕರ್ನಾಟಕದ ಅಭಿವೃದ್ಧಿಯಲ್ಲಿ ಮೋದಿ ಸರಕಾರದ ಪಾತ್ರದ ಬಗ್ಗೆ ಚರ್ಚೆಯಾಗಲಿದೆ.
ಇದೇ ಜನವರಿ 20ರಂದು ಮಂಗಳೂರಿನ ಕೋಡಿಯಾಲ್ ಬೈಲ್ ನ ಟಿ.ವಿ ರಾಮನ್ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಈ ಸಮಾವೇಶ ನಡೆಯಲಿದ್ದು, ಮೋದಿ ಸರಕಾರದ ಸಾಧನೆ ಮತ್ತು ಅಭಿವೃದ್ಧಿಗಳ ಬಗ್ಗೆ ಚರ್ಚೆ ನಡೆಯಲಿದೆ.












Click it and Unblock the Notifications