ಮಿಥುನ್ ರೈಗೆ ಬಹಿರಂಗ ಬೆದರಿಕೆಯ ವಿಡಿಯೋ ವೈರಲ್
ಮಂಗಳೂರು ಮೇ 27: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಗೆದ್ದ ಪಕ್ಷದ ಕಾರ್ಯಕರ್ತರು ಸೋತ ಅಭ್ಯರ್ಥಿ ಮನೆ ಮುಂದೆ ಪಟಾಕಿ ಸಿಡಿಸುವುದು, ಕಾರ್ಯಕರ್ತರು ಪರಸ್ಪರ ಹೊಡೆದಾಟ, ಗುದ್ದಾಟ ನಡೆಸುವುದು ಸಾಮಾನ್ಯವಾದಂತಾಗಿದೆ. ಆದರೆ ಸೋತ ಅಭ್ಯರ್ಥಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಾಗೂ ಕೊಲೆ ಬೆದರಿಕೆ ಒಡ್ಡಲಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ 23ರಂದು ನಡೆದ ವಿಜಯೋತ್ಸವವೊಂದರ ವಿಡಿಯೋ ಇದಾಗಿರುವುದಾಗಿ ತಿಳಿದುಬಂದಿದ್ದು, ಪೊಳಲಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪರ ವಿಜಯೋತ್ಸವದಲ್ಲಿ ಪರಾಜಿತ ಅಭ್ಯರ್ಥಿ ವಿಥುನ್ ರೈ ವಿರುದ್ಧ ಬೆದರಿಕೆಯ ಘೋಷಣೆಯನ್ನು ಕೂಗಲಾಗಿದೆ. ಚುನಾವಣೆ ಪ್ರಚಾರದ ಸಂದರ್ಭ ಮಿಥುನ್ ರೈ ಭಜರಂಗದಳವನ್ನು ನಿಷೇಧಿಸುವ ಹೇಳಿಕೆ ನೀಡಿದ್ದರು.

ಇದನ್ನೇ ತಮ್ಮ ವಿಜಯೋತ್ಸವ ಸಂದರ್ಭದಲ್ಲಿ ಬಳಸಿಕೊಂಡ ಕಾರ್ಯಕರ್ತರು, ಭಜರಂಗದಳವನ್ನು ನಿಷೇಧಿಸುವ ಮಾತೆತ್ತಿದರೆ, ಕೈ, ಕಾಲು ಇರಲ್ಲ, ಮತ್ತೂ ಮೀರಿದರೆ ತಲೆಯೂ ಇರಲ್ಲ ಎನ್ನುವ ಬೆದರಿಕೆಯ ಘೋಷಣೆ ಕೂಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು. ಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಲಾಗಿದೆ.












Click it and Unblock the Notifications