ದೇವಾಲಯದ ಚಿನ್ನಾಭರಣಗಳ ಲೆಕ್ಕವಿಡಲು ಫೋಟೋ ಕ್ಯಾಟಲಾಗ್
ಮಂಗಳೂರು, ಜೂ.24 : ದಕ್ಷಿಣ ಕನ್ನಡ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿರುವ ಚಿನ್ನಾಭರಣಗಳ ಕ್ಯಾಟಲಾಗ್ ನಿರ್ಮಿಸಿ ಆ.15ರೊಳಗೆ ಸಲ್ಲಿಸಬೇಕು, ನವೆಂಬರ್ ಅಂತ್ಯದೊಳಗೆ ಬೆಳ್ಳಿ ಮುಂತಾದ ವಸ್ತುಗಳ ಕ್ಯಾಟಲಾಗ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯ ದೇವಾಲಯಗಳಲ್ಲಿ ಭದ್ರತೆಯ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಮಂಗಳವಾರ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ದೇವಾಲಯದಲ್ಲಿರುವ ಆಭರಣಗಳನ್ನು ತೂಕ ಮಾಡಿ, ಅವುಗಳ ಮೌಲ್ಯ ನಿರ್ಧರಿಸಿ ಫೋಟೊ ಸಹಿತ ಕ್ಯಾಟಲಾಗ್ ಮಾಡಿ ಮುಜರಾಯಿ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಒಟ್ಟು 8 ದೇವಾಲಯಗಳ ಕ್ಯಾಟಲಾಗ್ ಸಿದ್ಧಪಡಿಸಲಾಗಿದೆ. ಚಿನ್ನದ ಜತೆಗೆ ಇರುವ ಅಮೂಲ್ಯ ರತ್ನಗಳ ಮೌಲ್ಯಮಾಪನವನ್ನು ನಡೆಸಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ಸೂಚಿಸುವ ಚಿನ್ನದ ಮೌಲ್ಯಮಾಪಕರ ಬಳಿ ಚಿನ್ನವನ್ನು ಮೌಲ್ಯಮಾಪನ ಮಾಡಿಸುವಂತೆ ತಿಳಿಸಿದರು. [ಬೆಂಗಳೂರಿನ ಸುಪ್ರಸಿದ್ಧ ಬನಶಂಕರಿ ದೇವಿ ಒಡವೆ ಕಳ್ಳತನ]
ಆದಾಯವಿರುವ ಎಲ್ಲಾ ದೇವಾಲಯಗಳಲ್ಲಿ ಅಂಗವಿಕಲರು ದೇವಸ್ಥಾನಕ್ಕೆ ಬರಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡುವಂತೆ ಮುಜರಾಯಿ ಇಲಾಖೆಯ ಸುತ್ತೋಲೆ ತಿಳಿಸಿದೆ. ಈ ಕುರಿತು ಕ್ರಮಗಳನ್ನು ಕೈಗೊಳ್ಳಲಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]
ಕುಕ್ಕೆ ಸುಬ್ರಹ್ಮಣ್ಯ, ಕದ್ರಿ ಮಂಜುನಾಥೇಶ್ವರ, ಬಪ್ಪನಾಡು ದುರ್ಗಾಪರಮೇಶ್ವರಿ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಪುತ್ತೂರು ಮಹಾಲಿಂಗೇಶ್ವರ, ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ, ಶರವೂರು ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲಿ ಈಗಾಗಲೇ ಕ್ಯಾಟಲಾಗ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications