Soujanya Murder Case: ಆರೋಪಿಗಳನ್ನು ಪತ್ತೆಹಚ್ಚಿ, ಆದರೆ ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನ ನಿಲ್ಲಿಸಿ
ಮಂಗಳೂರು, ಆಗಸ್ಟ್, 04: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅವಹೇಳನ ವಿರೋಧಿಸಿ ಕ್ಷೇತ್ರದ ಭಕ್ತರಿಂದ ಬೃಹತ್ ಸಭೆ ನಡೆದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು, ಭಕ್ತರು ಸೇರಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಿದ್ದು, ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅವಹೇಳನ ಮಾಡುವುದನ್ನು ಖಂಡಿಸಿದ್ದಾರೆ.
ಸೌಜನ್ಯಾ ಹತ್ಯೆ ಪ್ರಕರಣದ ನೆಪದಲ್ಲಿ ಧರ್ಮಸ್ಥಳ ಕ್ಷೇತ್ರದ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಆರೋಪ ಮಾಡುವುದನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಸಭೆಯ ಉದ್ಘಾಟನೆ ನಡೆದು ಬಳಿಕ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಬಳಿಗೆ ಭಕ್ತರು ಕಾಲ್ನಡಿಗೆ ಜಾಥಾ ನಡೆಸಿದರು.

ಧರ್ಮಸ್ಥಳ ಕ್ಷೇತ್ರದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ರಾಜ್ಯದ ವಿವಿಧೆಡೆಯಿಂದ ಬಂದ ಕ್ಷೇತ್ರದ ಭಕ್ತರು ವೀರೇಂದ್ರ ಹೆಗ್ಗಡೆ ಪರವಾಗಿ ಒಕ್ಕೊರಳ ಧ್ವನಿ ಎತ್ತಿದ್ದಾರೆ. ಅಲ್ಲದೆ ಈ ವೇಳೆ ವಿನಾಕಾರಣ ಅಪಪ್ರಚಾರ, ಆರೋಪ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಜಾಗೃತಿ ವೇದಿಕೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಿಂದ ಆಗಮಿಸಿದ್ದು, ಕ್ಷೇತ್ರದ ಪರವಾಗಿ ಧ್ವನಿ ಎತ್ತಿದ್ದಾರೆ. ಪ್ರತಿಯೊಬ್ಬರೂ ಧರ್ಮಸ್ಥಳ ಪರವಾಗಿ ಭಿತ್ತಿಪತ್ರ ಹಿಡಿದು ವಿನಾಕಾರಣ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಘೋಷಣೆ ಮೊಳಗಿಸಿದರು.
ಸೌಜನ್ಯಳ ಹತ್ಯೆಗೆ ನ್ಯಾಯ ಸಿಗಬೇಕು, ಆರೋಪಿ ಯಾರೇ ಆದರೂ ಬಂಧನ ಆಗಲೇಬೇಕು. ಆದರೆ ಕೇವಲ ಸೌಜನ್ಯಳ ಹೆಸರಿನಲ್ಲಿ ದುಡ್ಡು ಮಾಡುವ, ಹಿಂದೂ ಧರ್ಮದ ದೈವ ದೇವರುಗಳ ಬಗ್ಗೆ ಅವಹೇಳನ ಮಾಡುವವರನ್ನೂ ಗಲ್ಲಿಗೇರಿಸಬೇಕು. ಹಿಂದೂ ಸಮಾಜದಲ್ಲಿ ಸಾಕಷ್ಟು ಅಮಾಯಕ ಯುವಕ-ಯುವತಿಯರು ಬಲಿಯಾಗಿದ್ದಾರೆ. ಅಂತಹವರ ಪರ ಯಾಕೆ ಈ ನಕಲಿ ಹೋರಾಟಗಾರರು ಹೋರಾಟ ಮಾಡೋದಿಲ್ಲ? ಆಗ ನಿಮ್ಮ ಹಿಂದುತ್ವ ಎಲ್ಲಿ ಹೋಯ್ತು? ಎಂದು ಪ್ರತಿಭಟನಾಕಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸಿನ ಶಾಸಕರು, ಮಾಜಿ ಶಾಸಕರು ಪಾಲ್ಗೊಂಡಿದ್ದರು. ಕಾಂಗ್ರೇಸ್ ಮುಖಂಡರಾದ ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಬಿಜೆಪಿಯ ಮುಖಂಡ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್‌ನ ಮುಖಂಡ ಪರಿಷತ್ ಸದಸ್ಯ ಹರೀಶ್ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅಲದಂಗಡಿ ಅರಸರಾದ ಪದ್ಮಪ್ರಸಾದ್ ಅಜಿಲ ಸೇರಿದಂತೆ ಹಲವು ನಾಯಕರಿದ್ದರು.
ಇದೇ ವೇಳೆ ಕ್ಷೇತ್ರದ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರವಾಗಿ ಮಾತನಾಡಿದ್ದು, ಅವಹೇಳನ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಸೌಜನ್ಯಾ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಅದಕ್ಕಾಗಿ ಮರು ತನಿಖೆ ಆಗಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಎರಡೇ ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಬೇಕೆಂದು ಹೇಳಿದ್ದಾರೆ. ಜೊತೆಗೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು ಎಂದರು.
ಸೌಜನ್ಯಳ ತಾಯಿ ಹೇಳಿದ್ದೇನು?
ಪ್ರತಿಭಟನಾ ಸಭೆಗೆ ಸೌಜನ್ಯ ತಾಯಿ ಮತ್ತು ಸೌಜನ್ಯ ತಂಗಿಯಂದಿರು ಆಗಮಿಸಿದ್ದರು. ಈ ವೇಳೆ ಸೌಜನ್ಯ ತಾಯಿ ನನಗೂ ವೇದಿಕೆ ಹತ್ತಬೇಕು ಎಂದು ಒತ್ತಾಯಿಸದಾಗ ಗಲಾಟೆ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಹೆಗ್ಗಡೆ ಅನುಯಾಯಿಯೊಬ್ಬ ಸೌಜನ್ಯ ತಮ್ಮನ ಕಾಲರ್ ಹಿಡಿಯಲು ಪ್ರಯತ್ನಿಸಿದ್ದು, ಗೊಂದಲದ ವಾತವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಸೌಜನ್ಯ ಸಂಬಂಧಿಕರನ್ನು ಸ್ಥಳದಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ..
ಒಟ್ಟಿನಲ್ಲಿ ಒಂದೆಡೆ ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗಬೇಕು, ನೈಜ ಆರೋಪಿಗಳ ಬಂಧನ ಆಗಬೇಕೆಂದು ಒತ್ತಾಯ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ನಡೆಸಬಾರದು ಎನ್ನುವ ನೆಲೆಯಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಿದ್ದಾರೆ.












Click it and Unblock the Notifications