ಉಳ್ಳಾಳದಲ್ಲಿ ಕಡಲ್ಕೊರೆತ 40 ಮನೆಗಳಿಗೆ ಹಾನಿ
ಮಂಗಳೂರು, ಜೂ. 19 : ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರಗಳಲ್ಲಿ ಈಗಾಗಲೇ ಕಡಲ್ಕೊರೆತ ಸಮಸ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಪರಿಹಾರ ನೀಡಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಜತೆ ಸಭೆ ನಡೆಸಿದ ನಳೀನ್ ಕುಮಾರ್ ಕಟೀಲ್ ಅವರು, ಕಡಲ್ಕೊರೆತ, ಮಳೆಹಾನಿಗಳ ಬಗ್ಗೆ ವಿವರಣೆ ಪಡೆದರು. ತಕ್ಷಣ ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಉಳ್ಳಾಲ ಭಾಗದಲ್ಲಿ ಕಡಲ್ಕೊರೆತದಿಂದಾಗಿ 40 ಮನೆಗಳು ಮತ್ತು ಮೂರು ಶೆಡ್ ಗಳು ಹಾನಿಗೊಳಗಾಗಿವೆ. ಪಣಂಬೂರಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಸಂಸದರಿಗೆ ಮಾಹಿತಿ ನೀಡಿದರು.
ಉಳ್ಳಾಲ ಉಚ್ಚಿಲದಲ್ಲಿ ತನ್ನ ಮನೆ ಕಡಲ್ಕೊರೆತಕ್ಕೆ ಆಹುತಿಯಾಗಿದ್ದು, ಪರಿಹಾರವಾಗಿ 12,600 ರೂ. ಮಾತ್ರವೇ ದೊರಕಿದೆ ಎಂದು ಚಂದ್ರಶೇಖರ್ ಉಚ್ಚಿಲ ಸಭೆಯಲ್ಲಿ ಸಂಸದರಿಗೆ ಮಾಹಿತಿ ನೀಡಿದರು. ಪಕ್ಕಾ ಮನೆ ಕುಸಿತಗೊಂಡಲ್ಲಿ 70,000 ರೂ. ಪರಿಹಾರ ಹಾಗೂ ಭಾಗಶ: ಹಾನಿಗೊಳಗಾದರೆ 15,000 ರೂ. ಪರಿಹಾರ ನೀಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

ಕಡಲ್ಕೊರೆತ ತಡೆಗಟ್ಟಲು ಪಣಂಬೂರಿನಲ್ಲಿ ನಾಲ್ಕು ಹಾಗೂ ಉಳ್ಳಾಲದ 11 ಕಡೆಗಳಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಂಸದರಿಗೆ ಸಭೆಯಲ್ಲಿ ಮಾಹಿತಿ ನೀಡಿದರು. ಮಳೆಯ ಸಂದರ್ಭ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ಸಂಭವಿಸುವ ಅವಘಡಗಳ ಬಗ್ಗೆ ನಿಗಾ ವಹಿಸುವಂತೆ ನಳಿನ್ ಕುಮಾರ್ ಕಟೀಲ್ ಸಲಹೆ ನೀಡಿದರು.
ನೆರೆಯ ಸಂದರ್ಭದಲ್ಲಿ ಸ್ಥಳೀಯರಿಗೆ ಕುಡಿಯುವ ನೀರು, ಆಹಾರದ ಸಮಸ್ಯೆ ಎದುರಾಗುವುದರಿಂದ ಈ ಬಗ್ಗೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ನೆರೆ ಪೀಡಿತ ಪ್ರದೇಶಗಳಲ್ಲಿ ಈ ಬಗ್ಗೆ ಮುಂಚಿತವಾಗಿಯೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಸಂಸದರು ನಿರ್ದೇಶನ ನೀಡಿದರು.












Click it and Unblock the Notifications