ನಳಿನ್ ಕುಮಾರ್ ಕಟೀಲ್ ಮಹಾ ಸೊಂಬೇರಿ: ರಮಾನಾಥ್ ರೈ
ಮಂಗಳೂರು, ಜುಲೈ. 2: ನಳಿನ್ ಕುಮಾರ್ ಕಟೀಲ್ ಅತ್ಯಂತ ಸೊಂಬೇರಿ. ಸಂಸದನಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ, ಯಾವಾಗಲೂ ಸರ್ಕಿಟ್ ಹೌಸ್ ನಲ್ಲಿ ಮಲಗಿರುವ ಅತ್ಯಂತ ಆಲಸಿ ಎಂದು ಮಾಜಿ ಸಚಿವ ಬಿ. ರಮಾನಾಥ್ ರೈ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ನಳಿನ್ ಕುಮಾರ್ ಕಟೀಲ್ ತನ್ನ ಸಾಧನೆಯೆಂದು ಬಿಂಬಿಸುತ್ತಿದ್ದಾರೆ.
ಅಭಿವೃದ್ಧಿ ಯೋಜನೆಗಳ ಬಗ್ಗೆ ನಡೆಯುವ ಸಭೆಗಳಲ್ಲಿ ಭಾಗವಹಿಸದ ಅವರಿಗೆ, ಅಭಿವೃದ್ಧಿ ಕಾಮಗಾರಿಗಳ ವೇಗದ ಮಿತಿಯೇ ಗೊತ್ತಿಲ್ಲ.
ಡಾಲರ್ ಎಂದರೆ ಏನು ಎಂದು ಗೊತ್ತಿಲ್ಲದ ಸಂಸದ ಎಂದು ರೈ ವ್ಯಂಗ್ಯವಾಡಿದರು. ಈವರೆಗೆ ಮಲಗಿದ್ದ ನಳಿನ ಕುಮಾರ್ ಕಟೀಲ್ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ, 5 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಅತ್ಯಂತ ಹೆಚ್ಚು ಅನುದಾನ ದೊರೆತಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಟಿಕೆಟ್ ನೀಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸುಸುತ್ರವಾಗಿಯೇ ನಡೆಯಲಿದೆ ಎಂದು ರಮಾನಾಥ್ ರೈ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications