ಮಂಗಳೂರಿನಲ್ಲಿ ರಮಾನಾಥ್ ರೈ ಪತ್ರಕರ್ತರನ್ನು ಅಪ್ಪಿಕೊಂಡಿದ್ದೇಕೆ ?
ಮಂಗಳೂರು, ಸೆಪ್ಟೆಂಬರ್ 08: ಮಾಜಿ ಸಚಿವ ಬಿ.ರಮಾನಾಥ್ ರೈ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಅನುಕರಣಿಸಲು ಆರಂಭಿಸಿದ್ದಾರೆಯೇ? ಇಂತಹದೊಂದು ಸಂದೇಹ ಇದೀಗ ಮೂಡಲಾರಂಭಿಸಿದೆ. ಅದಕ್ಕೆ ಕಾರಣವೂ ಇದೆ.
ಇಂದು ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ್ ರೈ ಬಳಿಕ ಪತ್ರಕರ್ತರ ಬಳಿ ತೆರಳಿ ಅಪ್ಪಿಕೊಂಡರು. ರಮಾನಾಥ್ ರೈ ಅವರ ಈ ವರ್ತನೆಯನ್ನು ಹಿಂದೆಂದೂ ನೋಡಿರದ ಪತ್ರಕರ್ತರಿಗೆ ಏಕಾಏಕಿ ಆಶ್ಚರ್ಯವಾಯಿತು.
ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ತೈಲ ಬೆಲೆಯ ವಿರುದ್ಧ ಕಾಂಗ್ರೆಸ್ ಸೆಪ್ಟೆಂಬರ್ 10ರಂದು ಬಂದ್ ಕರೆ ನೀಡಿರುವ ಕುರಿತು ಇಂದು ರಮಾನಾಥ್ ರೈ ಸುದ್ದಿಗೋಷ್ಠಿ ಕರೆದಿದ್ದರು.
ಬಳಿಕ ಮಂಗಳೂರಿನ ಕಾಂಗ್ರೆಸ್ ಭವನದಿಂದ ಹೊರಬಂದ ರಮಾನಾಥ್ ರೈ ಅಲ್ಲೇ ಇದ್ದ ಪತ್ರಕರ್ತರತ್ತ ತೆರಳಿ ಭಾರತ ಬಂದ್ ಗೆ ಬೆಂಬಲ ನೀಡಬೇಕೆಂದು ಪತ್ರಕರ್ತರನ್ನು ಅಲಂಗಿಸಿ ಮನವಿ ಮಾಡಿದರು.

ಈ ಹಿಂದೆ ಸಂಸತ್ತಿನಲ್ಲಿ ಕೇಂದ್ರದ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಂತರ ಸಂಸತ್ ಕಲಾಪದ ನಡುವೆಯೇ ಪ್ರಧಾನಿ ಮೋದಿ ಅವರ ಬಳಿ ತೆರಳಿ ಮೋದಿ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು. ರಾಹುಲ್ ಗಾಂಧಿ ಅವರ ಈ ವರ್ತನೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ರಾಹುಲ್ ಅವರ ಅದೇ ನಡವಳಿಕೆಯನ್ನು ಇಂದು ರಮಾನಾಥ್ ರೈ ಪುನರಾವರ್ತಿಸಿದ್ದಾರೆ. ಮಂಗಳೂರಿನಲ್ಲಿ ರಮಾನಾಥ ರೈ ಅವರು ಪತ್ರಕರ್ತರನ್ನು ಅಪ್ಪಿ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ರಮಾನಾಥ್ ರೈ ಅವರ ಈ ವರ್ತನೆ ಪತ್ರಕರ್ತರ ವಲಯದಲ್ಲಿ ಒಂದೊಮ್ಮೆ ಗೊಂದಲ ಸೃಷ್ಟಿಸಿತು. ಒಟ್ಟಿನಲ್ಲಿ ರಮಾನಾಥ್ ರೈ ಪತ್ರಕರ್ತರಲ್ಲಿ ಬಂದ್ ಗೆ ಬೆಂಬಲ ನೀಡುವಂತೆ ವಿನಂತಿಸಿದ ವಿನೂತನ ಶೈಲಿ ಈಗ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications