ಕಾಂಗ್ರೆಸ್‌ನ ಮತಾಂತರ ನಿಷೇಧ ಕಾಯ್ದೆ ವಾಪಸ್ ನಿರ್ಧಾರಕ್ಕೆ ಕರಾವಳಿ ಕೇಸರಿ ನಾಯಕರ ಪ್ರತಿಕ್ರಿಯೆ ಹೀಗಿತ್ತು
ಮಂಗಳೂರು, ಜೂನ್, 16: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಗೆ ಎಳ್ಳು, ನೀರು ಬಿಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಹಿಂದೂ ಸಂಘಟನೆಗಳು, ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್ವೆಲ್, ಶಿವಾನಂದ ಮೆಂಡನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸರ್ಕಾರದ ಈ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ ಎಂದರು.

ಹಾಗೆಯೇ ಮತಾಂತರ ಎಂಬದು ಒಂದು ಸಾಮಾಜಿಕ ಪಿಡುಗು. ಇದು ಸಮಾಜದ ಅವನತಿಗೆ ಕಾರಣವಾಗಬಲ್ಲದು ಎನ್ನುವ ಸದುದ್ಧೇಶದಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಈಗ ಆಮಿಷಗಳನ್ನೊಡ್ಡಿ, ಬೆದರಿಸಿ ಮತಾಂತರ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ರದ್ದುಪಡಿಸುವ ನಿರ್ಧಾರದ ಮೂಲಕ ಕಾಂಗ್ರೆಸ್ ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮುಕ್ತವಾಗಿ ಮತಾಂತರಗೊಳಿಸಲು ಸಮಾಜ ವಿದ್ರೋಹಿಗಳಿಗೆ ಕಾಂಗ್ರೆಸ್ ಆಹ್ವಾನ ನೀಡುತ್ತಿದೆಯೇ.? ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.ಹಾಗೆಯೇ ಬಲವಂತದಿಂದ ಮತಾಂತರ ಮಾಡುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸುವ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ರಾಜ್ಯದಲ್ಲಿ ಮತಾಂತರಿಗಳ ಅಟ್ಟಹಾಸಕ್ಕೆ ರತ್ನ ಕಂಬಳಿ ಹಾಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಿರಂತರವಾಗಿ ಹಿಂದೂ ಸಮಾಜವನ್ನು ಒಡೆಯುವ ಕೃತ್ಯವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಆರೋಪಿಸಿದರು.
ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ಸು ಪಡೆಯುವ ತನ್ನ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಮಾತನಾಡಿ, ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಮುಂದಾಗಿದ್ದಾರೆ. ಈ ಮೂಲಕ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಠಕ್ಕರ್ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಮತಾಂತರ ಹಾವಳಿಯನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಹಳಷ್ಟು ವಿರೋಧವಾಗಿದ್ದರೂ ಲೆಕ್ಕಿಸದೆ, ಹಿಂದೂ ಸಮಾಜದ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ತಳೆದಿತ್ತು. ಇದೀಗ ಒಂದೆರಡು ಸಮುದಾಯದ ಒಲೈಕೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ, ಮತಾಂತರ ನಿಷೇಧ ಕಾಯ್ದೆ ನಾವು ವಾಪಸ್ ಪಡೆಯುವ ನಿರ್ಧಾರ ತಳೆದಿರುವುದು ಮುಂದೆ ಬೃಹತ್ ಆಂದೋಲನ ಒಂದಕ್ಕೆ ನಾಂದಿ ಹಾಡಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಲವ್ ಜಿಹಾದ್, ಮತಾಂತರ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ಕೇರಳವನ್ನು ಕೂಡ ಬಾಧಿಸುತ್ತಿದ್ದು, ನೂರಾರು ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದೆ. ಇದರ ನಡುವೆ ಕಾಯಿದೆ ಬಲಪಡಿಸುವ ಬದಲು ರಾಜ್ಯ ಸರ್ಕಾರದ ನಿರ್ಧಾರ ಮತಾಂತರವಾದಿ ಸಂಘಟನೆಗಳಲ್ಲಿ ಹೊಸ ಹುಮ್ಮಸ್ಸು ನೀಡಿದಂತಾಗಿದೆ ಎಂದು ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯತೆ, ದೇಶ ಪ್ರೇಮವನ್ನು ಬಿಂಬಿಸುವ ಪಠ್ಯಕ್ರಮವನ್ನು ಹಿಂಪಡೆದಿರುವುದು ದೇಶದಲ್ಲಿ ಮತ್ತೆ ಮತಾಂಧತೆಯ ಶಕ್ತಿಗಳು ವಿಜ್ರಂಬಿಸುವಂತೆ ಮಾಡುವಲ್ಲಿ ಸಂಶಯವಿಲ್ಲ. ಮತದಾರರು ಕೇವಲ ಒಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಎಡವಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಾಗೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರತ್ ಶೆಟ್ಟಿ ಎಚ್ಚರಿಸಿದರು.
ಇನ್ನು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೇಲ್ ಮಾತನಾಡಿ, ಕರ್ನಾಟಕದಲ್ಲಿ ಸಾವಿರಾರು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಸಮಾಜಘಾತಕ ಶಕ್ತಿಗಳ ವಿರುದ್ಧ ಇದ್ದಂತಹ ಮತಾಂತರ ನಿಷೇಧ ಕಾನೂನನ್ನು ಕಾಂಗ್ರೇಸ್ ಸರ್ಕಾರ ಹಿಂಪಡೆದೆ. ಈ ಮೂಲಕ ಕಾಂಗ್ರೆಸ್ ಮತಾಂತರಿಗಳ ಪರವಾಗಿ ನಿಂತಿರುವುದು ಹಿಂದೂ ಸಮಾಜಕ್ಕೆ ಮಾಡಿದಂತಹ ದ್ರೋಹ ಎಂದರು.
ಹಿಂದುಗಳು ಮತಾಂತರ ಆಗುವುದನ್ನು ತಡೆಯಲು ಈ ಕಾನೂನು ಅಗತ್ಯವಿದ್ದು, ಯಾವುದೇ ಕಾರಣಕ್ಕೂ ಮತಾಂತರ ನಿಷೇದ ಕಾನೂನನ್ನು ಹಿಂಪಡೆಯಬಾರದು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ನಂತರ ವಿ.ಎಚ್.ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಮಾತನಾಡಿ, ಕರ್ನಾಟಕದಲ್ಲಿ ಹಿಂದೂಗಳನ್ನು ಮೋಸದಿಂದ, ಆಮಿಷದಿಂದ ಮತ್ತು ಬಲವಂತವಾಗಿ ಮತಾಂತರ ಮಾಡುವ ಕೃತ್ಯದಿಂದ ರಕ್ಷಿಸಲು ಈ ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಆ ಮತಾಂತರ ನಿಷೇಧ ಕಾಯಿದೆಯನ್ನು ರದ್ದುಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಇದೊಂದು ಹಿಂದೂ ವಿರೋಧಿ ಕೃತ್ಯವಾಗಿದೆ. ಇದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಮತ್ತು ಈ ನಿರ್ಧಾರವನ್ನು ಹಿಂಪಡೆಯಲು ಆಗ್ರಹಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications