ಮೂಡಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?
ಮೂಡಬಿದಿರೆ, ಅಕ್ಟೋಬರ್ 22 : ಮೂಡಬಿದಿರೆಯ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶಾಂತ್ ಕಸಾಯಿ ಖಾನೆಯನ್ನು ಮುಚ್ಚಿಸಲು ಹೋರಾಟ ಆರಂಭಿಸಿದ್ದರು, ಇದರಿಂದಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುತ್ತದೆ ಇದುವರೆಗಿನ ತನಿಖೆ.
ಭಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಮತ್ತು ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿಯನ್ನು ಅಕ್ಟೋಬರ್ 9ರ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಅವರ ಅಂಗಡಿ ಸಮೀಪವೇ ಕೊಲೆ ಮಾಡಿದ್ದರು. ಈ ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ್ದ ವಾಮನ ಪೂಜಾರಿ ಅವರು ಅಕ್ಟೋಬರ್ 22ರಂದು ಸಾವನ್ನಪ್ಪಿದ್ದರು.

ವಾಮನ ಪೂಜಾರಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಅವರಿಗೆ ಪಾಕಿಸ್ತಾನದ ನಂಬರ್‌ಗಳಿಂದ ಬೆದರಿಕೆ ಕರೆ ಬರುತ್ತಿತ್ತು. ಇದರಿಂದಾಗಿ ಅವರು ಸಾವಿಗೆ ಶರಣಾದರು ಎಂಬ ಮಾತುಗಳು ಇವೆ.
ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣದ ಕುರಿತು ಸೂಕ್ತವಾದ ತನಿಖೆಯನ್ನು ನಡೆಸುತ್ತಿಲ್ಲ ಎಂಬುದು ಪ್ರತಿಪಕ್ಷ ಬಿಜೆಪಿಯ ಆರೋಪವಾಗಿದೆ. [ಪೂಜಾರಿ ಹತ್ಯೆ : ನಾಲ್ವರ ಬಂಧನ]
ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರು : ಮೂಡಬಿದಿರೆಯಲ್ಲಿರುವ ಕಸಾಯಿ ಖಾನೆಯನ್ನು ಮುಚ್ಚಿಸಲು ಪ್ರಶಾಂತ್ ಪೂಜಾರಿ ಅವರು ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದರು. ಆದ್ದರಿಂದ, ಅವರನ್ನು ಹತ್ಯೆ ಮಾಡಲಾಗಿದೆ ಎನ್ನುತ್ತದೆ ಇದುವರೆಗಿನ ತನಿಖೆ.
ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 8 ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಗೆ ದ್ವೇಷವೇ ಮೂಲಕ ಕಾರಣ ಎಂದು ತಿಳಿದುಬಂದಿದೆ. ಇದರಲ್ಲಿ ಯಾವುದಾದರೂ ಸಂಘಟನೆ ಪಾತ್ರವಿದೇಯೇ? ಎಂದು ನಾವು ತನಿಖೆ ನಡೆಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications