ಮಂಗಳೂರು: KPSC ಪರೀಕ್ಷಾ ಕೇಂದ್ರದ ಅವ್ಯವಸ್ಥೆ, ಅಭ್ಯರ್ಥಿಗಳ ತಪಾಸಣೆಗೆ ಮಕ್ಕಳ ಬಳಕೆ
ಮಂಗಳೂರು, ಡಿಸೆಂಬರ್ 18: ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ ಸಿ ವೃಂದದ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಿನ್ನೆ ಭಾನುವಾರ(ಡಿಸೆಂಬರ್ 18) ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಮಂಗಳೂರಿನಲ್ಲಿ ಈ ಪರೀಕ್ಷೆ ನಡೆದ ಕ್ರಮಕ್ಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ತಪಾಸಣೆಗೆ ಮಕ್ಕಳನ್ನು ಬಳಕೆ ಮಾಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಮಂಗಳೂರಿನ ಬಲ್ಮಠದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ ಸಿ ವೃಂದದ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಿತು. ಈ ವೇಳೆ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಸಣ್ಣ ಸಣ್ಣ ವಿದ್ಯಾರ್ಥಿಗಳು ಅಭ್ಯರ್ಥಿಗಳ ತಪಾಸಣೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ಕೆಪಿಎಸ್‌ಸಿ, ಪರೀಕ್ಷಾ ಅಕ್ರಮವನ್ನು ತಡೆಯುವ ದೃಷ್ಟಿಯಿಂದ ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್, ಬಾಡಿ ಕ್ಯಾಮೆರಾ ಹಾಗೂ ಮೊಬೈಲ್ ಜಾಮರ್ ಬಳಕೆಗೆ ಸೂಚಿಸಿದೆ. ಆದರೆ ಮಂಗಳೂರಿನ ಬಲ್ಮಠದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸರ್ಕಾರಿ ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಬಳಸಿಕೊಂಡು ಅಧಿಕಾರಿಗಳು ಬೇಜವಾಬ್ದಾರಿ ತೋರಿರುವ ಆರೋಪ ಕೇಳಿ ಬಂದಿದೆ.
ಕೆಪಿಎಸ್‌ಸಿಯ ಮಹತ್ವದ ಬಗ್ಗೆ, ಭದ್ರತೆ ಬಗ್ಗೆ ಅರಿವೇ ಇಲ್ಲದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಭದ್ರತೆಗೆ ನೇಮಕ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ಏಳೆಂಟು ವಿದ್ಯಾರ್ಥಿಗಳು ಮೆಟಲ್ ಡಿಟೆಕ್ಟರ್ ಹಿಡಿದು ಪರೀಕ್ಷಾರ್ಥಿಗಳ ತಪಾಸಣೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆಪಿಎಸ್‌ಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಶಾಸಕರ ಕಿಡಿ
ಕೆಪಿಎಸ್‌ಸಿ ಪರೀಕ್ಷೆಯ ಅಭ್ಯರ್ಥಿಗಳನ್ನು ಮಕ್ಕಳು ಪರಿಶೀಲನೆ ನಡೆಸುತ್ತಿರುವ ಫೋಟೋ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, 'ಕೆಪಿಎಸ್‌ಸಿ ನಡೆಸುತ್ತಿರುವ ಅಸಿಸ್ಟೆಂಟ್ ಅಕೌಂಟೆಂಟ್ ಪರೀಕ್ಷೆಗೆ ಮಂಗಳೂರಿನ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಂದ ತಪಾಸಣೆ ನಡೆಸಿ ಅಭ್ಯರ್ಥಿಗಳನ್ನು ಒಳ ಬಿಡಲಾಗುತ್ತಿದೆ. ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದು, ನಿಮಗೆ ಪರೀಕ್ಷೆ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಕೆಪಿಎಸ್‌ಸಿ ಬಾಗಿಲು ಹಾಕಿಕೊಂಡು ಅಲ್ಲಿಂದ ತೊಲಗಿ' ಎಂದು ಕೆಪಿಎಸ್‌ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, 'ಅಸಿಸ್ಟೆಂಟ್ ಅಕೌಂಟೆಂಟ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಿಗೆ ಹತ್ತನೇ ತರಗತಿ ಮಕ್ಕಳಿಂದ ತಪಾಸಣೆ ನಡೆಸುತ್ತಿರುವ ಕೆ.ಪಿ.ಎಸ್.ಸಿ ಇಲಾಖೆಯು ಪರೀಕ್ಷೆಗಳನ್ನು ನಡೆಸಲು ಹೇಗೆ ಸನ್ನದ್ಧರಾಗಿದ್ದಾರೆ ಎಂದು ತಿಳಿಯುತ್ತದೆ. ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ' ಎಂದು ಕಿಡಿಕಾರಿದ್ದಾರೆ.












Click it and Unblock the Notifications