Kambala: ದಾಖಲೆ ಬರೆದ ವಾಮಂಜೂರು ಜೋಡುಕರೆ ಕಂಬಳ, ಮಾಹಿತಿ ವಿವರ ತಿಳಿಯಿರಿ
ಮಂಗಳೂರು, ಫೆಬ್ರವರಿ 19: ಮಂಗಳೂರಿನ ವಾಮಂಜೂರು ಅಮೃತೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆದ ಸಂಕುಪೂಂಜ- ದೇವುಪೂಂಜ ಜೋಡುಕರೆ ಕಂಬಳವು ಈ ಬಾರಿಯ ಕಂಬಳ ಕೂಟದಲ್ಲಿಯೇ ಅತ್ಯಂತ ಕನಿಷ್ಠ ಸಮಯದಲ್ಲಿ ಮುಗಿದು ದಾಖಲೆ ಬರೆದಿದೆ.
ಶನಿವಾರ ಬೆಳಗ್ಗೆ 9.45 ಸುಮಾರಿಗೆ ಆರಂಭವಾಗಿದ್ದ 166 ಜೊತೆ ಕೋಣಗಳು ಭಾಗವಹಿಸಿದ್ದ ವಾಮಂಜೂರು ಕಂಬಳದ ಅಂತಿಮ ಹಂತದ ಸ್ಪರ್ಧೆಯು ರವಿವಾರ ಬೆಳಗ್ಗೆ 8.50ಕ್ಕೆ ಅಂತ್ಯವಾಗಿದೆ.

ಕಳೆದ ವರ್ಷವು 23 ಗಂಟೆಯೊಳಗೆ ಮುಗಿದಿದ್ದ ವಾಮಂಜೂರು ತಿರುವೈಲುಗುತ್ತು ಕಂಬಳವು ಈ ಬಾರಿಯೂ 23 ಗಂಟೆಯೊಳಗೆ ಸಂಪನ್ನವಾಗಿ ಮಾದರಿಯಾಗಿದೆ. ಕಂಬಳವನ್ನು ಸರಿಯಾದ ಸಮಯದಲ್ಲಿ ಮುಗಿಸಲು ಹೊಸ ಹೊಸ ತಂತ್ರಜ್ಞಾನದ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ವಾಮಂಜೂರು ಕಂಬಳವು ಇತರ ಕೂಟಗಳಿಗೆ ಮಾದರಿಯಾಗಿದೆ.
ಕನೆಹಲಗೆ ವಿಭಾಗದಲ್ಲಿ ಆರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಐದು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 14 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 35 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 23 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 83 ಜೊತೆ ಕೋಣಗಳು ಭಾಗವಹಿಸಿದ್ದವು..
ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದ ನಡೆಯುವ ಕಂಬಳಕ್ಕೆ ದೇವರ ಕಂಬಳ ಎಂಬ ಪ್ರಸಿದ್ಧಿಯೂ ಇದೆ..ದೇವರ ಗರ್ಭ ಗುಡಿಗೆ ಅಭಿಮುಖ ವಾಗಿ ಇರುವ ಗದ್ದೆಯಲ್ಲಿ ಸಂಕುಪೂಂಜ - ದೇವುಪೂಂಜ ಜೋಡುಕರೆ ಕಂಬಳ ನಡೆಯುತ್ತದೆ. 230 ವರ್ಷಗಳ ಹಿಂದೆ ಬದುಕಿದ್ದ ತಿರುವೈಲು ಗುತ್ತಿನ ಕುಟುಂಬಿಕರ ಹಿರಿಯರಾದ ಸಂಕುಪೂಂಜ - ದೇವುಪೂಂಜ ಎಂಬವರ ಹೆಸರಿನಲ್ಲಿ ಈ ಕಂಬಳವನ್ನು ಆಯೋಜನೆ ಮಾಡಲಾಗುತ್ತಿದೆ.ಅಲ್ಲದೆ ಸ್ವತಃ ವಾಮಂಜೂರು ಅಮೃತೇಶ್ವರ ದೇವಸ್ಥಾನದ ದೇವರೇ ಈ ಕಂಬಳವನ್ನು ವೀಕ್ಷಿಸುತ್ತಾನೆ ಎಂಬ ಪ್ರತೀತಿಯೂ ಇದೆ.
ಈ ಹಿನ್ನೆಲೆಯಲ್ಲಿ ಕಂಬಳ ಆರಂಭಕ್ಕೆ ಮುನ್ನ ದೇವರ ರಂಗಪೂಜೆಯಾಗಿ ಕಂಬಳದ ಕರೆಗೆ ಐದು ಸುತ್ತು ಬಲಿ ಬಂದು ಗಂಧ ಪ್ರಸಾದವನ್ನು ಪ್ರೋಕ್ಷಣೆ ಮಾಡಿದ ಬಳಿಕ ಕಂಬಳ ಆರಂಭಗೊಳ್ಳುತ್ತದೆ. ಈ ಬಾರಿಯ ಸಂಕುಪೂಂಜ - ದೇವುಪೂಂಜ ಜೋಡುಕರೆ ಕಂಬಳದಲ್ಲಿ 166 ಜತೆ ಕೋಣಗಳು ಭಾಗಿಯಾಗಿದೆ.
ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಗೌರವಾಧ್ಯಕ್ಷತೆಯಲ್ಲಿ ತಿರುವೈಲುಗುತ್ತು ನವೀನ್ ಚಂದ್ರ ಆಳ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಂಬಳ ದಲ್ಲಿ ಪ್ರತೀ ಕಂಬಳದಲ್ಲಿ ಇರುವಂತೆ ಆರು ವಿಭಾಗದಲ್ಲಿ ಕಂಬಳ ಸ್ಪರ್ಧೆ ನಡೆದಿದ್ದು, ವಿಜೇತ ಕೋಣಗಳಿಗೆ ಒಂದು ಪವನ್ ನಿಂದ ಅರ್ಧ ಪವನ್ ವರೆಗೆ ನೀಡಲಾಗಿದೆ.ವಿಜೇತ ಕೋಣಗಳ ಓಟಗಾರನಿಗೆ ಆಕರ್ಷಕ ಬಹುಮಾನ ನೀಡಲಾಗಿದೆ. ನಾಗ ಸಾನಿಧ್ಯ ಇರುವ ಪುಣ್ಯ ಕ್ಷೇತ್ರ ತಿರುವೈಲು ಆಗಿದ್ದು,ಗ್ರಾಮದ ಒಳಗೆ ಏನೇ ಶುಭ ಕೆಲಸವಾಗಬೇಕಾದರೂ ಮೊದಲ ಮರ್ಯಾದೆ ಈ ಗುತ್ತು ಮನೆಗೆ ಸಲ್ಲಬೇಕಾದುದು ವಿಶೇಷ..
12ನೇ ವರ್ಷದ ವಾಮಂಜೂರು ತಿರುವೈಲುಗುತ್ತು "ಸಂಕುಪೂಂಜ - ದೇವುಪೂಂಜ" ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ
ಕನೆಹಲಗೆ: 06 ಜೊತೆ
ಅಡ್ಡಹಲಗೆ: 05 ಜೊತೆ
ಹಗ್ಗ ಹಿರಿಯ: 14 ಜೊತೆ
ನೇಗಿಲು ಹಿರಿಯ: 35 ಜೊತೆ
ಹಗ್ಗ ಕಿರಿಯ: 23 ಜೊತೆ
ನೇಗಿಲು ಕಿರಿಯ: 83 ಜೊತೆ
ಒಟ್ಟು ಕೋಣಗಳ ಸಂಖ್ಯೆ: 166 ಜೊತೆ
ಕನೆಹಲಗೆ
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ "ಬಿ"
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ಹಗ್ಗ ಹಿರಿಯ
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಕಾವೂರು ದೋಟ ಸುದರ್ಶನ್
ದ್ವಿತೀಯ: ಹರೇಕಳ ಕೈಡೇಲುಗುತ್ತು ಮಿಥುನ್ ಎಂ ರೈ "ಎ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ
ಪ್ರಥಮ: ಕಾರ್ಕಳ ನೆಕ್ಲಾಜೆ ಗುತ್ತು ಪ್ರವೀಣ್ ಪ್ರದೀಪ್ ಕೋಟ್ಯಾನ್ "ಎ"
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
ದ್ವಿತೀಯ: ಕಾರ್ಕಳ ನೆಕ್ಲಾಜೆ ಗುತ್ತು ಪ್ರವೀಣ್ ಪ್ರದೀಪ್ ಕೋಟ್ಯಾನ್ "ಬಿ"
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ನೇಗಿಲು ಹಿರಿಯ
ಪ್ರಥಮ: ಮಿಜಾರು ಬರ್ಕೆ ಪ್ರವೀಣ್ ಭಂಡಾರಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ನಾವುಂದ ಆಶ್ರಿತ ಇಶಾನಿ ವಿಶ್ವನಾಥ ಪೂಜಾರಿ "ಎ"
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
ನೇಗಿಲು ಕಿರಿಯ
ಪ್ರಥಮ: ವಾಮಂಜೂರು ತಿರುವೈಲು ಮಜಲುಮನೆ ಸಂಜೀವ ಮೂಲ್ಯ "ಎ"
ಓಡಿಸಿದವರು: ಹೀರೇಬೆಟ್ಟು ಹರ್ಷಿತ್
ದ್ವಿತೀಯ: ನೆಲ್ಲಿಕಾರು ಸ್ವಸ್ತಿಕ್ ಯುವ ಬಾಂಧವರು "ಎ"
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ












Click it and Unblock the Notifications