ಮಂಗಳೂರು: ಹಜ್ ಯಾತ್ರಿಗಳ ಲಸಿಕಾ ಶಿಬಿರಕ್ಕೆ ಚಾಲನೆ
ಮಂಗಳೂರು, ಜುಲೈ 4: ಹಜ್ ಯಾತ್ರೆಗೆ ತೆರಳುವ ಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ. ಶ್ರೀಮಂತನಿಗೆ ಹೋಗುವ ಅವಸರ ಲಭಿಸದೇ ಇರಬಹುದು. ಹಾಗೂ ಅತೀ ಬಡವನಿಗೆ ಪವಿತ್ರ ಕಅಬಾ ಸಂದರ್ಶಿಸುವ ಭಾಗ್ಯ ಲಭಿಸಿದ ಉದಾಹರಣೆಗಳು ಬಹಳಷ್ಟಿವೆ. ಹಜ್'ಗೆ ತೆರಳುವವರು ನಮ್ಮ ನಾಡಿನ ಒಳಿತಿಗಾಗಿ ದುಆ ಮಾಡಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಮಂಗಳವಾರ ಮಂಗಳೂರು ಕೊಡಿಯಾಲ್ ಬೈಲ್ ಯೇನಪೋಯ ಆಸ್ಪತ್ರೆಯಲ್ಲಿ ಸರಕಾರದ ಹಜ್ ಸಮಿತಿ ಮೂಲಕ ತೆರಳುವ ಹಜ್ಜಾಜ್ ಗಳಿಗೆ ನೀಡಲಾಗುವ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯದಿಂದ ಹಜ್'ಗೆ ತೆರಳುತ್ತಿರುವ ಎಲ್ಲಾ ಹಜ್ಜಾಜ್'ಗಳ ಸುಗಮ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವರಾದ ರೋಶನ್ ಬೇಗ್ ನೇತೃತ್ವದಲ್ಲಿ ರಾಜ್ಯ ಸರಕಾರ ಸಕಲ ವ್ಯವಸ್ಥೆಯನ್ನು ಕಲ್ಪಿಸಿದೆ. ಕೇಂದ್ರ ಹಾಗೂ ರಾಜ್ಯ ಹಜ್ ಸಮಿತಿ ಸುಸೂತ್ರವಾಗಿ ಕೆಲಸ ಮಾಡುತ್ತಿದೆ. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರ ಜಾಗ ಗುರುತಿಸಿದ್ದು, ಅನುದಾನ ಬಿಡುಗಡೆಗೊಳಿಸಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಯೇನಪೋಯ ಮಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದರು. ಮಾಣಿ ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಮುಖ್ಯಸ್ಥರಾದ ಮಚ್ಚಂಪಾಡಿ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿದರು.

ರಾಜ್ಯ ಹಜ್ ಸಮಿತಿ ಕಾರ್ಯನಿರ್ವಾಹಕರಾದ ಸರ್ಫರಾಝ್ ಖಾನ್ ಮಾತನಾಡಿ ಇಂದು ದ.ಕ.ಜಿಲ್ಲೆಯ 565 ಹಜ್ಜಾಜ್ ಗಳಿಗೆ ರೋಗ ತಡೆಗಟ್ಟುವ ಹಾಗೂ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಜುಲೈ 24, 25 ರಂದು ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ 4.10ಕ್ಕೆ, ಜುಲೈ 25ರಂದು ಮಧ್ಯಾಹ್ನ 1 ಗಂಟೆಗೆ ಹೀಗೇ ಒಟ್ಟು 5 ವಿಮಾನಗಳು ಮಂಗಳೂರು ವಿಮಾನ ನಿಲ್ದಾಣದಿಂದ ಹಜ್'ಗೆ ಹೊರಡಲಿದೆ. ಬಜ್ಪೆ ಅನ್ಸಾರಿಯಾ ಸ್ಕೂಲ್'ನಲ್ಲಿ ಈ ಬಾರಿಯ ಮಂಗಳೂರು ಹಜ್ ಕ್ಯಾಂಪ್ ನಡೆಯಲಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications