ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆ
ಮಂಗಳೂರು, ಅಕ್ಟೋಬರ್ 20: ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ. 10 ದಿನಗಳ ಕಾಲ ನಡೆದ ಈ ಉತ್ಸವದ ಕೊನೆಯ ದಿನವಾದ ಶುಕ್ರವಾರ ಆರಂಭವಾದ ನವದುರ್ಗೆಯರ ಶೋಭಾಯಾತ್ರೆ ಶನಿವಾರ ಮುಂಜಾನೆ ಸಂಪನ್ನಗೊಂಡಿದೆ.
ನಿನ್ನೆ ಸಂಜೆ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದಿಂದ ಆರಂಭಗೊಂಡ ಶೋಭಾಯಾತ್ರೆಯು ನಗರದೆಲ್ಲೆಡೆ ಸಂಚರಿಸಿ ಇಂದು ಮುಂಜಾನೆ ಶ್ರೀ ಕ್ಷೇತ್ರ ಕುದ್ರೋಳಿಯನ್ನು ಪ್ರವೇಶಿಸಿತು.
ನಿನ್ನೆ ಸಂಜೆ ಆರಂಭಗೊಂಡಿದ್ದ ಭವ್ಯ ಮೆರವಣಿಗೆ ಕಂಬ್ಳಾ ರಸ್ತೆ, ಮಣ್ಣ ಗುಡ್ಡೆ ಮಾರ್ಗವಾಗಿ ಲೇಡಿ ಹಿಲ್ ಸರ್ಕಲ್, ನವಭಾರತ ಸರ್ಕಲ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ.ಕಾಲೇಜು ವೃತ್ತದಿಂದ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ ಸ್ಟ್ರೀಟ್ ಚಿತ್ರಾ ಟಾಕೀಸು ಅಳಕೆಯಾಗಿ ಮರಳಿ ಕುದ್ರೋಳಿ ಕ್ಷೇತ್ರವನ್ನು ಪ್ರವೇಶಿಸಿತು.

ಬಳಿಕ ಮಹಾಗಣಪತಿ, ನವದುರ್ಗೆಯರು ಸೇರಿದಂತೆ ಶಾರದಾ ಮಾತೆಯ ವಿಗ್ರಹವನ್ನು ಗೋಕರ್ಣನಾಥೇಶ್ವರ ದೇವಳದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು. ಕೊನೆಯದಾಗಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನಾ ಪೂಜೆ ನೆರವೇರಿಸುವ ಮೂಲಕ ಮಂಗಳೂರು ದಸರಾ ಮಹೋತ್ಸವಕ್ಕೆ ತೆರೆಬಿದ್ದಿತು.
ಕಲ್ಯಾಣಿಯಲ್ಲಿ ದೇವರ ಬಲಿಸೇವೆ ಹಾಗೂ ತೆಪ್ಪೋತ್ಸವ ನೆರವೇರಿಸಿ ನಂತರ ಶ್ರೀ ಶಾರದಾಮಾತೆಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು. ಅತ್ಯಂತ ವೈಭವಯುತವಾಗಿ ನಡೆದ ಮಂಗಳೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಕೊನೆಗೊಂಡಿದೆ.

ಸುಮಾರು 9 ಕಿಮೀ ಉದ್ದದ ಮೆರವಣಿಗೆಗೆ ಪೂರಕವಾಗಿ ರಸ್ತೆಯುದ್ದಕ್ಕೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ನವದುರ್ಗೆಯರ ಈ ಭವ್ಯ ಮೆರವಣಿಗೆಯಲ್ಲಿ 75 ಟ್ಯಾಬ್ಲೋಗಳು, ಕಲಾತಂಡಗಳು ಸೇರಿದಂತೆ ರಾಜ್ಯದ ಸಂಸ್ಕೃತಿ ಪರಂಪರೆ ಬಿಂಬಿಸುವ ಡೊಳ್ಳು ಕುಣಿತ, ಭಜನಾ ತಂಡಗಳು, ಕೋಲಾಟ, ನಂದಿಕೋಲು, ಪಟದ ಕುಣಿತದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಅದಲ್ಲದೇ ಈ ಮೆರವಣಿಗೆಯಲ್ಲಿ ತಾಸೆಯ ಬಡಿತಕ್ಕೆ ಹೆಜ್ಜೆಹಾಕುವ ಮಂಗಳೂರಿನ ದಸರಾ ಹುಲಿ ವೇಷದ ತಂಡಗಳ ನರ್ತನ ಮುಖ್ಯ ಆಕರ್ಷಣೆಯಾಗಿತ್ತು.












Click it and Unblock the Notifications