ಕುಡುಕನಿಗೆ ಸಿಕ್ಕ ₹10 ಲಕ್ಷ ಹಣದ ಅಸಲಿ ಸತ್ಯವೇನು..? ಕಮಿಷನರ್ ಹೇಳಿದ್ದೇನು..?
ಮಂಗಳೂರು, ಡಿಸೆಂಬರ್ 7: ಕುಡುಕನಿಗೆ ಸಿಕ್ಕ ಹತ್ತು ಲಕ್ಷ ರೂಪಾಯಿ ಪೊಲೀಸ್ ವಶ ಪ್ರಕರಣ ಸಂಬಂಧಿಸಿದಂತೆ ಪ್ರಕರಣ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ವೆಲ್‌ನಲ್ಲಿ ನವೆಂಬರ್ 26ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ದಾರಿಯಲ್ಲಿ ಶಿವರಾಜ್ ಎಂಬ ವ್ಯಕ್ತಿಗೆ ಸಿಕ್ಕ ಹಣ ಪೊಲೀಸರ ಪಾಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಕಂಕನಾಡಿ ಠಾಣಾ ಪೊಲೀಸರು ಶಿವರಾಜ್‌ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಶಿವರಾಜ್ ಹಣವನ್ನು ಬೇರೆ ವ್ಯಕ್ತಿಗೆ ನೀಡಿದ್ದ ಬಗ್ಗೆ ಬಾಯ್ಬಿಟ್ಟಿದ್ದ ಎನ್ನಲಾಗಿತ್ತು. ಈ ಎಲ್ಲಾ ಗೊಂದಲಗಳ ಬಗ್ಗೆ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿದ್ದಾರೆ.

ಮೂರು ಲಕ್ಷ ರೂಪಾಯಿ ಹಣವನ್ನು ಸ್ನೇಹಿತನಿಗೆ ನೀಡಿದ್ದ ಶಿವರಾಜ್
ನವೆಂಬರ್ 26ರಂದು ಬಾಕ್ಸ್ ಮತ್ತು ಕವರ್‌ನಲ್ಲಿ ಶಿವರಾಜ್‌ಗೆ ಹಣ ಸಿಕ್ಕಿದೆ. ಸ್ಪಷ್ಟವಾಗಿ ಅದರಲ್ಲಿ ಎಷ್ಟು ಹಣ ಇತ್ತು ಎಂದು ಆತನಿಗೂ ಗೊತ್ತಿರಲಿಲ್ಲ. ಹಣ ಸಿಕ್ಕಿದ ಸಂದರ್ಭದಲ್ಲಿ ಶಿವರಾಜ್, ತುಕರಾಮ್ ಎಂಬುವವರಿಗೆ 50ಸಾವಿರ ಆರು ಕಟ್ಟು ಹಣ ಅಂದರೆ ಮೂರು ಲಕ್ಷ ರೂಪಾಯಿ ನೀಡಿದ್ದಾನೆ. ಆ ಹಣದಲ್ಲಿ ತುಕರಾಮ್ 500 ರೂಪಾಯಿ ಮಾತ್ರ ಉಪಯೋಗಿಸಿದ್ದಾನೆ. ಮಾಧ್ಯಮಗಳಲ್ಲಿ ಹಣ ಸಿಕ್ಕಿದ ವಿಚಾರ ಗೊತ್ತಾಗಿ ತುಕರಾಮ್ ಆ ಹಣವನ್ನು ಮತ್ತೆ ಠಾಣೆಗೆ ನೀಡಿದ್ದಾರೆ. ತುಕರಾಮ್ ಮತ್ತು ಆತನ ಮನೆಯವರು ಎರಡು ಲಕ್ಷದ ತೊಂಭತ್ತ ಒಂಭತ್ತು ಸಾವಿರ ಐನೂರು ರೂಪಾಯಿ ನೀಡಿದ್ದಾರೆ. ಶಿವರಾಜ್ ನೀಡಿದ ಹಣದಲ್ಲಿ ಐನೂರು ರೂಪಾಯಿಯನ್ನು ತುಕರಾಮ್ ಖರ್ಚು ಮಾಡಿದ್ದಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಶಿವರಾಜ್ ಬಳಿ ಹಣ ತೆಗೆದುಕೊಂಡ ಹೋದವರಿಗೆ ಎಚ್ಚರಿಕೆ ನೀಡಿದ ಕಮಿಷನರ್
ತುಕರಾಮ್ ಮೊಬೈಲ್‌ನಲ್ಲಿ ಸುದ್ದಿ ಬಿತ್ತರ ನೋಡಿ ಠಾಣೆಗೆ ಬಂದು ಹಣ ಕೊಟ್ಟಿದ್ದಾರೆ. ಸದ್ಯ ಮೂರುವರೆ ಲಕ್ಷ ರೂಪಾಯಿ ಹಣವನ್ನು ಸುಪರ್ದಿ ಪಡೆದಿದ್ದೇವೆ. ಘಟನಾ ಸ್ಥಳದ ಸಿಸಿ ಟಿವಿ ಫೂಟೇಜ್ ಅನ್ನು ಪರಿಶೀಲನೆ ಮಾಡುತ್ತಿದ್ದೇವೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣ ಎಂದು ಸಾಬೀತು ಮಾಡಬೇಕು. ಶಿವರಾಜ್ ನಿಂದ ಹಣ ತೆಗೆದುಕೊಂಡು ಹೋದವರು ಠಾಣೆಗೆ ಬಂದು ಹಣ ಕೊಡಬೇಕು. ಶಿವರಾಜ್ ಮತ್ತು ತುಕರಾಮ್ ಮೇಲೆ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಹಣ ತೆಗೆದುಕೊಂಡು ಹೋಗಿ ಮತ್ತೆ ಕೊಡದಿದ್ದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಮಿಷನರ್ ಎಚ್ಚರಿಕೆ ನೀಡಿದರು.

ಶಿವರಾಜ್‌ಗೆ ಸಿಕ್ಕ ಒಟ್ಟು ಹಣದ ಬಗ್ಗೆ ಪೊಲೀಸರಿಗೂ ಗೊಂದಲ
ಇನ್ನು ಪೊಲೀಸರು ಆ ದಿನ ಡೈರಿ ಎಂಟ್ರಿಕೊಂಡಿದ್ದಾರೆ ಅಷ್ಟೇ. ವಾರಿದಸುದಾರರು ಬಂದ ಸಂಧರ್ಭದಲ್ಲಿ ಹಿಂದುರಿಗಿಸಬಹುದು, ಯಾರಾದರೂ ಬಂದರೆ ಅಲ್ಲೇ ಕೊಟ್ಟುಬಿಡೋಣ ಎಂದು ಪೊಲೀಸರು ಠಾಣೆಯಲ್ಲಿ ಹಣ ಇಟ್ಟಿದ್ದಾರೆ. ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ. ಪೊಲೀಸರು ತಡವಾಗಿ ಈ ಪ್ರಕರಣದಲ್ಲಿ ಮಾಡಿದ ಬಗ್ಗೆ ವರದಿ ತರಿಸುತ್ತೇನೆ. ಈ ವಿಚಾರದಲ್ಲಿ 75KP ಆ್ಯಕ್ಟ್ ನಡಿ ವಾರೀಸುದಾರರಿಲ್ಲದ ಹಣದ ಪ್ರಕರಣ ದಾಖಲಿಸಿದ್ದೇವೆ ಎಂದು ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಶಿವರಾಜ್‌ಗೆ ಒಟ್ಟು ಹಣ ಸಿಕ್ಕಿದೆಷ್ಟು ಎಂಬುವುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆ ಹಣವನ್ನು ಲೆಕ್ಕ ಮಾಡುವಷ್ಟು ಸ್ಥಿತಿಯಲ್ಲಿ ಆಗ ಶಿವರಾಜ್ ಇರಲಿಲ್ಲ. ಕುಡಿದು ನಿಲ್ಲಲಾಗದ ಸ್ಥಿತಿಯಲ್ಲಿ ಶಿವರಾಜ್ ಇದ್ದ. ಶಿವರಾಜ್ ನಿಂದ ಯಾರಾದರೂ ಹಣ ತೆಗೆದುಕೊಂಡು ಹೋಗಿದ್ದಾರಾ ಎನ್ನುವುದನ್ನು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ಶಿವರಾಜ್ ಕೊಟ್ಟ ಹಣವನ್ನು ಪೊಲೀಸರಿಗೆ ನೀಡಿದ ದಂಪತಿ
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತುಕರಾಮ್ ಪತ್ನಿ ಪುಷ್ಪ, "ತುಕರಾಮ್ ಅವರು ಮೀನು ತರಲು ಪಂಪ್ವೆಲ್‌ಗೆ ಹೋಗಿದ್ದರು. ಮರಳಿ ಬರುವ ಸಂದರ್ಭದಲ್ಲಿ ಹಣದೊಂದಿಗೆ ಮರಳಿದ್ದರು. ನಮ್ಮ ಜೀವಮಾನದಲ್ಲಿ ಅಷ್ಟು ಹಣ ನೋಡಿಲ್ಲ. ಅವರು ಹಣ ತಂದಾಗ ಗಾಬರಿಯಾಗಿತ್ತು. ಬಳಿಕ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಭಯ ಆಯಿತು. ಮೂರು ಲಕ್ಷ ರೂಪಾಯಿ ಹಣದಲ್ಲಿ ಐನೂರು ರೂಪಾಯಿಯನ್ನು ತುಕರಾಮ್ ಅವರು ತೆಗೆದುಕೊಂಡಿದ್ದಾರೆ. ಮನೆಗೆ ತಂದ ಹಣವನ್ನು ಪೊಲೀಸ್ ಠಾಣೆಗೆ ನೀಡಿದ್ದೇವೆ ಅಂತಾ ಪುಷ್ಪ ತಿಳಿಸಿದ್ದಾರೆ.












Click it and Unblock the Notifications