ಫೇಸ್ ಬುಕ್ ನಲ್ಲಿ ಸಚಿವ ಖಾದರ್ ವಿರುದ್ಧ ಅವಹೇಳನಕಾರಿ ಕಾಮೆಂಟ್, ಬಂಧನ
ಮಂಗಳೂರು, ಆಗಸ್ಟ್ 11: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಪ್ರಕಟಿಸಿದ ವ್ಯಕ್ತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡಬಿದ್ರೆಯ ದಿವ್ಯ ಪ್ರಸಾದ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಕುರಿತು ಫೇಸ್ ಬುಕ್ ಪೇಜ್ ನಲ್ಲಿ ದಿವ್ಯ ಪ್ರಸಾದ್ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಯುಟಿ ಖಾದರ್ ಅವರ ಸ್ನೇಹಿತರಾದ ಅಶ್ರಫ್ ಮೋನು ಹಾಗೂ ಜಬ್ಬಾರ್ ಎಂಬುವರು ದಿವ್ಯ ಪ್ರಸಾದ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಕದ್ರಿ ಪೊಲೀಸರು ದಿವ್ಯ ಪ್ರಸಾದ್ ಅವರನ್ನು ಬೆಂಗಳೂರಿನಿಂದ ಬಂಧಿಸಿ ಕರೆತಂದಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಯುಟಿ ಖಾದರ್, ಈ ರೀತಿಯ ಘಟನೆಗಳು ಈ ಹಿಂದೆ ಕೂಡ ನಡೆದಿವೆ. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಈ ರೀತಿಯ ಕೆಟ್ಟ ಭಾಷೆ ಬಳಸುವ ವ್ಯಕ್ತಿಯ ವ್ಯಕ್ತಿತ್ವ ಇದರಿಂದ ಬಯಲಾಗಿದೆ ಎಂದು ಹೇಳಿದರು.












Click it and Unblock the Notifications