ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು, ಡ್ಯಾಂ ಕಟ್ಟಿದ್ರು ನೋಡಿ
ಮಂಗಳೂರು, ಜೂನ್ 1: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯರು ಐದು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಡ್ಯಾಂಗಳನ್ನು ನಿರ್ಮಿಸಲು ಹೊರಟಿದ್ದಾರೆ.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಟ್ಟು 1000 ಡ್ಯಾಂ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದರಲ್ಲಿ 5 ಕಿಂಡಿ ಅಣೆಕಟ್ಟುಗಳನ್ನು ಪೂರ್ಣ ಪ್ರಮಾಣದಲ್ಲಿ ಮಹಿಳೆಯರೇ ನಿರ್ಮಿಸಲಿದ್ದಾರೆ.
ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ಸೇರಿಕೊಂಡು ಊರಿಗೊಂದು ನೀರಿನ ಆಸರೆ ನಿರ್ಮಿಸುವ ಪರಿಕಲ್ಪನೆಯಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಸುಮಾರು 15ರಷ್ಟು ಮಹಿಳೆಯರೇ ಸೇರಿಕೊಂಡು ಹಾರೆ, ಪಿಕ್ಕಾಸು ಹಿಡಿದುಕೊಂಡು ಕೆಲಸ ಆರಂಭಿಸಿದ್ದಾರೆ. ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಈ ಐದು ಕಿಂಡಿ ಅಣೆಕಟ್ಟು ನಿರ್ಮಾಣ ನಡೆಯುತ್ತಿದೆ. ಇದಕ್ಕಾಗಿ ಒಟ್ಟು 21.73 ಲಕ್ಷ ರೂ. ಮಂಜೂರು ಮಾಡಲಾಗಿದೆ.

ಪುತ್ತೂರಿನಲ್ಲಿ ಬಲ್ನಾಡ್ ನಲ್ಲೊಂದು ಅಣೆಕಟ್ಟು
ಪುತ್ತೂರಿನ ಬಲ್ನಾಡ್ ಗ್ರಾಮದ ಹಸಂತಡ್ಕ ಕಿಂಡಿ ಅಣೆಕಟ್ಟಿಗೆ ಐದು ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಸಂಪೂರ್ಣವಾಗಿ ಮಹಿಳೆಯರೇ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಈ ಯೋಜನೆ ನಿರ್ಮಿಸಿಕೊಡಲಿದ್ದಾರೆ.

ಸುಳ್ಯ, ಬೆಳ್ತಂಗಡಿ, ಬಂಟ್ವಾಳ
ಸುಳ್ಯ ತಾಲೂಕಿನ ಕನಕಮಜಲು (4.98 ಲಕ್ಷ ರೂ. ಮೊತ್ತ), ಬಂಟ್ವಾಳ ತಾಲೂಕಿನ ನರಿಂಗಾನ (3.70 ಲಕ್ಷ ರೂ. ) ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬಜಿಲಕೋಡಿ (ಐದು ಲಕ್ಷ ರೂ.), ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಪೂಂಜಲ (ಐದು ಲಕ್ಷ )ದಲ್ಲಿ ಇನ್ನುಳಿದ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿವೆ.

ಮಳೆಗಾಲಕ್ಕೂ ಮೊದಲು ನಿರ್ಮಾಣ
ಈಗಾಗಲೇ ಸ್ಥಳೀಯವಾಗಿರುವ ಸಣ್ಣ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟುವ ಕೆಲಸ ಆರಂಭಿಸಿದ್ದಾರೆ. ಕೆಲವು ಮುಗಿಯುವ ಹಂತ ತಲುಪಿದ್ದರೆ, ಇನ್ನು ಕೆಲವನ್ನು ಮಳೆಗಾಲಕ್ಕೂ ಮುನ್ನ ಕಟ್ಟಿ ಮುಗಿಸು ಪಣ ತೊಟ್ಟಿದ್ದಾರೆ ನಾರಿ ಮಣಿಗಳು. ಮಳೆಗಾಲ ಬರುತ್ತಿದ್ದಂತೆ ಮಹಿಳಾ ಶಕ್ತಿಯ ಸಂಕೇತವಾಗಿ ಈ ಜಲಕಟ್ಟೆಗಳು ಕಂಗೊಳಿಸಲಿವೆ.

ದೊಡ್ಡ ಸಾಧನೆ
"ಗ್ರಾಮಗಳ ನೀರಿನ ಕೊರತೆಯನ್ನು ನೀಗಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಲಿರುವ ಈ ಚೆಕ್ ಡ್ಯಾಂ ನಿರ್ಮಾಣದಲ್ಲಿ ಮಹಿಳೆಯರೇ ತೊಡಗಿಸುತ್ತಿರುವುದು ಒಂದು ದೊಡ್ಡ ಹೆಜ್ಜೆ," ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಎಂ ಆರ್ ರವಿ.

ಮಹಿಳಾ ಶಕ್ತಿಯ ಸಂಕೇತ
"ಡ್ಯಾಂ ನಿರ್ಮಾಣದ ಎಲ್ಲಾ ಕಾರ್ಯಗಳನ್ನೂ ಮಹಿಳೆಯರೇ ನಡೆಸಲಿದ್ದಾರೆ. ಮಹಿಳಾ ಶಕ್ತಿಯ ಸಂಕೇತವಾಗಿ ಕಿಂಡಿ ಅಣೆಕಟ್ಟುಗಳು ಹೊರಹೊಮ್ಮಲಿದೆ," ಎನ್ನುತ್ತಾರೆ ಯೋಜನೆಯ ಸಮನ್ವಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಜಿಲ್ಲಾ ಪಂಚಾಯತ್ ವಯಸ್ಕ ಶಿಕ್ಷಣ ಅಧಿಕಾರಿ ಕೆ ಸುಧಾಕರ್.
ಹೀಗೆ ಮೊದಲ ಬಾರಿಗೆ ಮಹಿಳೆಯರೇ ತಮ್ಮ ತಮ್ಮ ಪ್ರದೇಶಗಳ ನೀರಿನ ಕೊರತೆ ನೀಗಿಸಲು ಈ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.












Click it and Unblock the Notifications