ಜೆಡಿಎಸ್ ಕಾರ್ಪೊರೇಟರ್ ಅಜೀಜ್ ಕುದ್ರೋಳಿ ಬಂಧನ
ಮಂಗಳೂರು, ಜೂ.22 : ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿಯ ಜೆಡಿಎಸ್ ಕಾರ್ಪೊರೇಟರ್ ಅಜೀಜ್ ಅವರನ್ನು ಪಾಂಡೇಶ್ವರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪಾಲಿಕೆ ಕಚೇರಿಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಜೂ. 10ರಂದು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮತ್ತು ಇತರ ಅಧಿಕಾರಿಗಳು ಕಂದುಕ ನೀರೇಶ್ವಾಲ್ಯದ ವಾರ್ಡ್ ನಂ 45ಕ್ಕೆ ಸ್ಥಳ ತನಿಖೆಗೆ ತೆರಳಿದಾಗ ಕಾರ್ಪೊರೇಟರ್ ಅಜೀಜ್ ಮತ್ತು ಇತರ ಸುಮಾರು 50 ಮಂದಿಯ ತಂಡ ಅಡ್ಡಿಪಡಿಸಿ ಅಧಿಕಾರಿಗಳ ಜತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರು ಅಜೀಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಜೂ.23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. [ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷರ ರಾಜೀನಾಮೆ]
ಅಜೀಜ್ ವಿರುದ್ಧ ಐಪಿಸಿ ಸೆಕ್ಷನ್ 353 (ಹಲ್ಲೆ, ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ), 506 (ಬೆದರಿಕೆ) 341 (ಕರ್ತವ್ಯಕ್ಕೆ ಅಡ್ಡಿ ಪಡಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯ ಆರೋಪಿಯನ್ನು ಜೂ.23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಕ್ರಮ ಖಂಡನೀಯ : ಮಂಗಳೂರು ಪಾಲಿಕೆಯ ಜೆಡಿಎಸ್ ಸದಸ್ಯ ಅಜೀಜ್ ಕುದ್ರೋಳಿ ಅವರು ಮನವಿ ಸಲ್ಲಿಸಲು ಹೋದಾಗ ಅಧಿಕಾರಿಗಳು ಅವರನ್ನು ನಿಂದಿಸಿ ಬಳಿಕ ಕೇಸು ದಾಖಲಿಸಿರುವ ಕ್ರಮ ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪಕ್ಷದ ಮುಖಂಡ ಎಂ.ಬಿ. ಸದಾಶಿವ ಅವರು ಒತ್ತಾಯಿಸಿದ್ದಾರೆ.












Click it and Unblock the Notifications