ನ. 25ರಂದು ಹೊಸ ಕಡಬ ಮತ್ತು ಮೂಡುಬಿದಿರೆ ತಾಲೂಕು ಉದ್ಘಾಟನೆ: ಯು ಟಿ ಖಾದರ್
ಮಂಗಳೂರು, ನವೆಂಬರ್ 20: ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಕಡಬ ಮತ್ತು ಮೂಡುಬಿದಿರೆ ತಾಲೂಕುಗಳನ್ನು ನವೆಂಬರ್ 25 ಉದ್ಘಾಟನೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 25 ರಂದು ರಾಜ್ಯ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅಧಿಕೃತವಾಗಿ ಎರಡು ಹೊಸ ತಾಲೂಕುಗಳಾದ ಕಡಬ ಹಾಗು ಮೂಡಬಿದಿರೆಯನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕಡಬ ಹಾಗೂ ಮೂಡಬಿದಿರೆ ತಾಲೂಕುಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ ಅವರು, ಇದೇ ಸಂದರ್ಭದಲ್ಲಿ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಕಬ್ಬು ಬೆಲೆ ನಿಗದಿಪಡಿಸಿರುವುದು ಕೇಂದ್ರ ಸರಕಾರ, ಮುಖ್ಯಮಂತ್ರಿಯಲ್ಲ. ಕಬ್ಬು ಬೆಳೆಗಾರರ ಜೊತೆ ಸಮಾಲೋಚನೆ ನಡೆಸಿ ಕೇಂದ್ರ ಸರಕಾರ ಈ ಹಿಂದೆ ಬೆಲೆ ನಿಗದಿಪಡಿಸಿತ್ತು.
ಆದರೆ ಈಗ ರಾಜ್ಯದ ಮುಖ್ಯಮಂತ್ರಿಯ ಮೇಲೆ ಆರೋಪ ಮಾಡಲಾಗುತ್ತಿದೆ. ಇದೀಗ ಮತ್ತೆ ಬೆಲೆ ನಿಗದಿ ಮಾಡಬೇಕಾಗಿರುವುದು ಕೇಂದ್ರ ಸರಕಾರ ಹೊರತು ರಾಜ್ಯ ಸರಕಾರವಲ್ಲ ಎಂದರು.
ಅಡ್ಯಾರ್ ಹರೇಕಳದಲ್ಲಿ ನೇತ್ರಾವತಿ ನದಿಗೆ ಬ್ಯಾರೇಜ್, ಸೇತುವೆಯನ್ನು ನಿರ್ಮಿಸಲು 178 ಕೋಟಿ ರೂಪಾಯಿ ಯೋಜನೆ ಜಾರಿಯಾಗಲಿದೆ. ಸಮುದ್ರದ ನೀರು ಒಳನುಗ್ಗುವುದನ್ನು ತಡೆಯಲು ಮತ್ತು ಕುಡಿಯುವ ನೀರಿನ ಬಳಕೆಯ ದೃಷ್ಟಿಯಿಂದಲೂ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications