ಮೋದಿ, ನಿಡ್ಡೋಡಿ, ಕಬೀರ್ ಬಗ್ಗೆ ಪೂಜಾರಿ
ಮಂಗಳೂರು, ಮೇ.1: ಕರ್ನಾಟಕದಲ್ಲಿಲೋಕಸಭೆ ಚುನಾವಣೆ ಬಿಸಿ ಮುಗಿದ ನಂತರ ಬಹುತೇಕ ರಾಜಕಾರಣಿಗಳಂತೆ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಕೆಲಕಾಲ ವಿಶ್ರಾಂತಿ ಪಡೆದು ಮತ್ತೊಮ್ಮೆ ವಾಕ್ಸಮರಕ್ಕೆ ಇಳಿದಿದ್ದಾರೆ. ಪೂಜಾರಿ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಮೋದಿ ಮದುವೆ, ನಿಡ್ಡೋಡಿ ವಿದ್ಯುತ್ ಸ್ಥಾವರ, ಕಬೀರ್ ಶೂಟೌಟ್ ಪ್ರಕರಣದ ಬಗ್ಗೆ ಮಾತನಾಡಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮತದಾನದ ನಂತರ ಪಕ್ಷದ ಚಿನ್ಹೆ ತೋರಿದ್ದು ತಪ್ಪು ಎಂದರು. ನಂತರ ಮೋದಿ ಅವರು ನಾಮಪತ್ರ ಸಲ್ಲಿಕೆ ಸಮಯದಲ್ಲಿ ತಮಗೆ ಮದುವೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಜಶೋದಾಬೇನ್ ಅವರನ್ನು ಪತ್ನಿ ಎಂದು ಒಪ್ಪಿಕೊಂಡರೆ ಸಾಲದು, ಸಭ್ಯ ಗೃಹಸ್ಥನಂತೆ ಆಕೆಯನ್ನು ಮನೆ ತುಂಬಿಸಿಕೊಳ್ಳಬೇಕು. ಜಶೋದಾಬೇನ್ ಅವರು ಮೋದಿ ಮನೆ ಸೇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪೂಜಾರಿ ಹೇಳಿದರು.
ನಿಡ್ಡೋಡಿ ಬಗ್ಗೆ ಸಿಎಂ ಬರೆದಿದ್ದಾರೆ ಎನ್ನಲಾದ ಪತ್ರ, ಬಾಬಾ ರಾಮದೇವ್, ಕಬೀರ್ ಸಾವು, ಇನ್ನಿತರ ವಿಷಯಗಳ ಬಗ್ಗೆ ಪೂಜಾರಿ ಅವರು ಹೇಳಿದ್ದೇನು ಮುಂದೆ ಓದಿ...[ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಸಿದ್ದರಾಮಯ್ಯ ಪತ್ರ ಬರೆದಿದ್ದು ನಿಜ ಆದರೆ..
ಕನ್ನಡ ಜಿಲ್ಲೆಗಳಿಗೆ ಕಂಟಕಪ್ರಾಯವಾಗಿರುವ ನಿಡ್ಡೋಡಿ ವಿದ್ಯುತ್ ಯೋಜನೆ ಕೈ ಬಿಡುವಂತೆ ಜನತೆ ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಯೋಜನೆ ಅನುಷ್ಠಾನಗೊಳಿಸುವಂತೆ ಕೋರಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಆದರೆ, ಸಿದ್ದರಾಮಯ್ಯ ಅವರು ಒಂದು ವರ್ಷದ ಕೆಳಗೆ ಪತ್ರ ಬರೆದಿದ್ದರು. ಮತ್ತೆ ಪತ್ರ ಬರೆದಿಲ್ಲ. ನಿಡ್ಡೋಡಿ ಬಗ್ಗೆ ಕೇಂದ್ರ ಸರ್ಕಾರದೊಡನೆ ಚರ್ಚೆ ನಡೆಸಿಲ್ಲ

ನಿಡ್ಡೋಡಿ ವಿದ್ಯುತ್ ಸ್ಥಾವರಕ್ಕೆ ನಾನು ವಿರೋಧಿ
ಕೇಂದ್ರದಲ್ಲಿ ಮುಂದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ನಿಡ್ಡೋಡಿ ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ನಾನಂತೂ ವಿರೋಧಿಸುತ್ತೇನೆ. ಶೇ 80ಕ್ಕೂ ಅಧಿಕ ಜನರ ವಿರೋಧಿಸಿದ ಮೇಲೆ ಹೈಕೋರ್ಟ್ ಕೂಡಾ ಯೋಜನೆ ವಿರುದ್ಧವಾಗಿ ತೀರ್ಪು ನೀಡಿದೆ. ನಾವು ಅಸೆಂಬ್ಲಿ ಹಾಗೂ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನಿಸಬೇಕಿದೆ ಎಂದರು.

ಕಬೀರ್ ಸಾವಿನ ಪ್ರಕರಣ ಬಿಜೆಪಿ ನಿಲುವು
ಕಬೀರ್ ಸಾವಿನ ಪ್ರಕರಣದ ಲಾಭ ಪಡೆಯುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕಿಲ್ಲ. ಬಿಜೆಪಿ ನಾಯಕರು ಪ್ರತಿನಿತ್ಯ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾ, ಕಬೀರ್ ಕುಟುಂಬಕ್ಕೆ ನೀಡುವ ಪರಿಹಾರ ಧನಕ್ಕೆ ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಬಳಿ ದೂರುತ್ತೇವೆ ಎಂದು ಹೇಳಿದ್ದಾರೆ. ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದರು.

ಬ್ರಹ್ಮರಕೂಟ್ಲು ಟೋಲ್ ಗೇಟ್ ದಾಳಿ ಬಗ್ಗೆ
ಬ್ರಹ್ಮರಕೂಟ್ಲು ಟೋಲ್ ಗೇಟ್ ದಾಳಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಪಕ್ಷಾತೀತವಾಗಿ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು. ಏ.25ರಂದು ಟೋಲ್ ಗೇಟ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಪರಾರಿಯಾಗಿದ್ದರು.

ಬಾಬಾ ರಾಮದೇವ್ ಅವರ ಹೇಳಿಕೆ ಖಂಡನೀಯ
ಬಾಬಾ ರಾಮದೇವ್ ಅವರ ಹೇಳಿಕೆ ಖಂಡನೀಯ, ಯಾವುದೇ ಧರ್ಮ, ಜಾತಿ, ಪಂಥ, ಸಮುದಾಯವನ್ನು ಹೀಯಾಳಿಸುವುದು ಅಕ್ಷಮ್ಯ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಐವಾನ್ ಡಿಸೋಜ, ಹಿರಿಯ ಕಾಂಗ್ರೆಸ್ ನಾಯಕ ಕೊಡಿಜಾಲ್ ಇಬ್ರಾಹಿಂ, ಸುರೇಶ್ ಬಳ್ಳಾಲ, ಅರುಣ್ ಕೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications