RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಮುಖ್ಯ ಅತಿಥಿ
ಮಂಗಳೂರು, ಡಿಸೆಂಬರ್ 04: ಈ ಹಿಂದೆ ಆರ್‌ಎಸ್‌ಎಸ್ ಸಂಘಟನೆ ಹಾಗೂ ಕಾರ್ಯಕರ್ತರ ವಿರುದ್ಧ ಹೇಳಿಕೆ ನೀಡುತ್ತಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇದೀಗ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿರುವುದು ಅಚ್ಚರಿ ಮೂಡಿಸಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ಮುಂದಾಳತ್ವದ ಬಂಟ್ವಾಳದಲ್ಲಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 9ರಂದು ಹೊನಲು ಬೆಳಕಿನ ಕ್ರೀಡೋತ್ಸವ ಆಯೋಜಿಸಲಾಗಿದೆ. ಈ ಕ್ರೀಡೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕ್ರೀಡೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಹೆಸರು ಹಾಕಲಾಗಿದೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರತಿ ವರ್ಷ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಆರ್‌ಎಸ್ಎಸ್ ಪ್ರಮುಖರ ಸಹಿತ ಉದ್ಯಮಿಗಳು, ರಾಜಕಾರಣಿಗಳು ಗಣ್ಯರು ಆಗಮಿಸುವುದು ಸಾಮಾನ್ಯ. ಆದರೆ ಈ ಬಾರಿ ಎಚ್.ಡಿ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿರುವುದು ಅಚ್ಚರಿಯ ಸಂಗತಿ. ಇನ್ನು ಮುಖ್ಯವಾದ ಅಂಶವೆಂದರೆ ಆಹ್ವಾನ ಪತ್ರಿಕೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಹೆಸರೇ ಮಾಯವಾಗಿದೆ.
ಹೊನಲು ಬೆಳಕಿನ ಕ್ರೀಡೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅನೇಕ ರಾಜಕೀಯ ಗಣ್ಯರ ಹೆಸರಿದ್ದು ನಳೀನ್ ಕುಮಾರ್ ಕಟೀಲ್ ಹೆಸರು ಎಲ್ಲೂ ಕಂಡು ಬಂದಿಲ್ಲ. ಈ ಹಿಂದೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೂರು ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಬರದ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಈ ಬಾರಿ ನಳೀನ್ ಕುಮಾರ್ ಕಟೀಲ್ ಹೆಸರು ಕಾರ್ಯಕ್ರಮದಿಂದ ದೂರ ಇಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಈ ಹಿಂದೆ ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಮಾತನಾಡಿದ್ದ, ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಮಾತನಾಡಿದ್ದ ಎಚ್.ಡಿ ಕುಮಾರಸ್ವಾಮಿಯನ್ನು ಕಲ್ಲಡ್ಕ ಪ್ರಭಾಕರ್ ಭಟ್ ಕಾರ್ಯಕ್ರಮಕ್ಕೆ ಆಹ್ವಾನಿಸಿರುವು ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ.
ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಯಾವ್ಯಾವ ಕಾರ್ಯಕ್ರಮಗಳು..?
ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ತರಗತಿಗಳ 3,300 ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಯಾರ್ಯಾರು..?
ಡಿಸೆಂಬರ್ 9ರಂದು ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ , ಸದಾಶಿವ ಸ್ವಾಮೀಜಿ, ಪ್ರಮೋದ್ ಮಧ್ವರಾಜ್, ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಎಸ್.ಎಲ್ ಭೋಜೇಗೌಡ ಸೇರಿದಂತೆ ಹಲವು ಶಾಸಕರು, ಮಾಜಿ ಸಚಿವರು, ಉದ್ಯಮಿಗಳು ಭಾಗಿಯಾಗಲಿದ್ದಾರೆ.












Click it and Unblock the Notifications