ವಿಡಿಯೋ; ಮೊಬೈಲ್ ಕದ್ದ ಮೀನುಗಾರನ್ನು ತಲೆಕಳೆಗಾಗಿ ನೇತು ಹಾಕಿದರು
ಮಂಗಳೂರು, ಡಿಸೆಂಬರ್ 23; ಮೊಬೈಲ್ ಕದ್ದ ಎಂಬ ಆರೋಪದಡಿಯಲ್ಲಿ ಸಹೋದ್ಯೋಗಿಗಳೇ ಮೀನುಗಾರನನ್ನು ಅಮಾನುಷವಾಗಿ ಸಿನೀಮಾ ರೀತಿಯಲ್ಲಿ ಹಲ್ಲೆಗೈದು, ಕೊಲೆ ಮಾಡಿ ಸಮುದ್ರಕ್ಕೆ ಬಿಸಾಡಲು ಯತ್ನಿಸಿದ ಘಟನೆ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾಟಮಾರಿ ಪಾಲೇಮ್ ನಿವಾಸಿ ವೈಲಾ ಶೀನು ಎಂಬಾತನನ್ನು 6 ಮಂದಿ ಸಹೋದ್ಯೋಗಿ ಮೀನುಗಾರರು ಕೊಲೆ ಮಾಡಲು ಯತ್ನಿಸಿದ್ದಾರೆ.
ಬೋಟ್‌ನ ರೋಪ್‌ಗೆ ತಲೆ ಕೆಳಗಾಗಿ ನೇತು ಹಾಕಿ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೊಲಯ್ಯ, ಅವುಲ ರಾಜಕುಮಾರ್, ಕಾಟಿಂಗರಿ ಮನೋಹರ್, ವುಟುಕುರಿ ಜಾಲಯ ಹಾಗೂ ಪಲಯ ಕಾವೇರಿ ಗೋವಿಂದಯ್ಯ ಬಂಧಿತ ಆರೋಪಿಗಳು. ಈ ಎಲ್ಲಾ ಆರೋಪಿಗಳು ಮಂಗಳೂರಿನ ದಕ್ಕೆಯಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಡಿಸೆಂಬರ್ 15ರಂದು ಘಟನೆ ನಡೆದಿದ್ದು, ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಡಿಸೆಂಬರ್ 14 ರಂದು ರಾತ್ರಿ ಸಂತ್ರಸ್ತ ವೈಲಾ ಶೀನು ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ "OOHN SHAILESH 2" ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಬಂದು ಮಲಗಿದ್ದ. ವೈಲಾ ಶೀನು ಬೋಟ್‌ನಲ್ಲಿ ಮಲಗಿದ್ದ ವೇಳೆಯಲ್ಲಿ ಆ ಬೋಟ್‌ನಿಂದ ಮೊಬೈಲ್ ಕಳವಾಗಿತ್ತು.
ಮರುದಿನ ಡಿಸೆಂಬರ್ 15 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ "JOHN SHAILESH 2" ಬೋಟಿನಲ್ಲಿ ಕೆಲಸ ಮಾಡುತ್ತಿರುವ ಈ ಪ್ರಕರಣದ ಆರೋಪಿಗಳಾಗಿರುವ ಆಂಧ್ರ ಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೊಲಯ್ಯ, ಅವುಲ ರಾಜಕುಮಾರ್, ಕಾಟಿಂಗರಿ ಮನೋಹರ್, ವುಟುಕುರಿ ಜಾಲಯ ಹಾಗೂ ಪಲಯ ಕಾವೇರ ಗೋವಿಂದಯ್ಯ, ವೈಲಾ ಶೀನು ಬಳಿ ಬಂದು, "ನಿನ್ನೆ ರಾತ್ರಿ ಬೋಟಿಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ" ಎಂದು ಆರೋಪಿಸಿದ್ದಾರೆ
ಬಳಿಕ ಆರೋಪಿಗಳು ವೈಲ ಶೀನುವನ್ನು ಆ ಬೋಟ್ ನಿಂದ ಅಪಹರಿಸಿ "JOHN SHAILESH 2" ಬೋಟಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆರೋಪಿಗಳು ಸೇರಿಕೊಂಡು ವೈಲಾ ಶಿನು ವಿನ ಕೈ ಕಾಲುಗಳನ್ನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ, ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ, ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್‌ನ ರೋಪ್‌ಗೆ ಸಿಕ್ಕಿಸಿ ತಲೆ ಕೆಳಗಡೆ ಮಾಡಿ ನೇತು ಹಾಕಿದ್ದಾರೆ.
ನೇತಾಡುತ್ತಿದ್ದ ವೈಲಾ ಶೀನು ಕೈಗಳಿಗೆ ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳಪಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತ್ನಿಸಿದ್ದಾರೆ. ಆರೋಪಿಗಳು ವೈಲು ಶೀನುವಿನ ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದು, ಆ ಸಮಯ ಸಾರ್ವಜನಿಕರು ಬಂದು ವೈಲಾ ಶೀನುವನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಆರೋಪಿಗಳು ಎಲ್ಲರೂ ಆಂಧ್ರದ ಮೂಲದವರಾಗಿದ್ದು, ಹಲವು ತಿಂಗಳುಗಳಿಂದ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅತೀ ಹೆಚ್ಚು ಹೊರ ರಾಜ್ಯದ ಕಾರ್ಮಿಕರೇ ದುಡಿಯುತ್ತಿದ್ದಾರೆ. ಅವರ ಹಿನ್ನಲೆ ಬೋಟ್ ಮಾಲೀಕರ ಬಳಿಯೂ ಇರೋದಿಲ್ಲ. ಹೀಗಾಗಿ ಎಲ್ಲರ ಹಿನ್ನಲೆಯನ್ನು ಮೊದಲೇ ತಿಳಿದುಕೊಳ್ಳಲು ಸೂಚಿಸಿರೋದಾಗಿ" ಹೇಳಿದ್ದಾರೆ.
ಸದ್ಯ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ತಡ ರಾತ್ರಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಮಂಗಳೂರು ದಕ್ಕೆ ಬಳಿಯಿಂದ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ವಶಕ್ಕೆ ಪಡೆದಿದ್ದಾರೆ.












Click it and Unblock the Notifications