ಬಂಟ್ವಾಳದ ಪ್ರೇಮಸಲ್ಲಾಪದ ವೈರಲ್ ವಿಡಿಯೋ ಹಿಂದಿತ್ತು ಹನಿಟ್ರ್ಯಾಪ್ ಜಾಲ
ಮಂಗಳೂರು, ಜೂನ್ 28: ಬಂಟ್ವಾಳದಲ್ಲಿ ನಡೆದ ಪ್ರೇಮಸಲ್ಲಾಪದ ವಿಡಿಯೋ ವೈರಲ್ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಇದು ಹನಿಟ್ರ್ಯಾಪ್ ಮೂಲಕ ಹಣಕ್ಕಾಗಿ ಬೆದರಿಕೆ ಒಡ್ಡುವ ಜಾಲ ಎಂಬುದು ಬಹಿರಂಗಗೊಂಡಿದೆ.
ಪ್ರೇಮಸಲ್ಲಾಪದ ವಿಡಿಯೋ ವೈರಲ್ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಟ್ವಾಳ ಪೊಲೀಸರು ನಿನ್ನೆ ಬಂಧಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಂದಿಗಿನ ಪ್ರೇಮ ಸಲ್ಲಾಪದ ವಿಡಿಯೋವನ್ನು ವೈರಲ್ ಮಾಡಿದ ಆರೋಪದ ಮೇಲೆ ಬಂಟ್ವಾಳದ ಟಿಪ್ಪು ನಗರ ನಿವಾಸಿ ಮೋನು ಯಾನೆ ಅಬ್ದುಲ್ ರಹಿಮಾನ್ (55) ಅವರನ್ನು ಬಂಟ್ವಾಳ ಠಾಣಾ ಪೋಲೀಸರ ವಶಕ್ಕೆ ಪಡೆದಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಿಜ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ. ತನಿಖೆ ವೇಳೆ ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. ಹನಿ ಟ್ರ್ಯಾಪ್ ಮೂಲಕ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳದ ಲೊರೆಟ್ಟು ಟಿಪ್ಪು ನಗರ ನಿವಾಸಿ 55 ವರ್ಷದ ಮೋನು ಯಾನೆ ಅಬ್ದುಲ್ ರಹಿಮಾನ್ ಅವರು ಹನಿಟ್ರ್ಯಾಪ್ ಗೆ ಒಳಗಾದವರು. 8 ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ಅಬ್ದುಲ್ ರಹಿಮಾನ್ ಗೆ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಪರಿಚಯವಾದ ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ರಹಿಮಾನ್ ಭೇಟಿಯಾಗಿದ್ದು, ಆ ಸಮಯ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆ. ಆ ಸಮಯದಲ್ಲಿ ಹುಡುಗಿಯು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.
ಈ ಘಟನೆ ನಡೆದ ಕೆಲವು ದಿನಗಳ ನಂತರ ರಹಿಮಾನ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಈ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ರಹಿಮಾನ್ ಹುಡುಗಿಯಲ್ಲಿ ವಿಚಾರಿಸಿದಾಗ, ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದಿದ್ದಾಳೆ.
ಆ ವ್ಯಕ್ತಿಯು ವಿಡಿಯೋ ಇಟ್ಟುಕೊಂಡು ರಹಿಮಾನ್ ಗೆ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ರಹಿಮಾನ್ ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ 4 ಜನ ಅಪರಿಚಿತರು ರಹಿಮಾನ್ ನ್ನು ಅಪಹರಿಸಿ 60,000 ರೂಪಾಯಿ ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡು atm ಕಾರ್ಡ್ ಬಳಸಿ 9,000 ರೂಪಾಯಿ ದೋಚಿದ್ದಾರೆ. ಅದೇ ದಿನ ಮತ್ತೆ 48,000 ರೂಪಾಯಿಗಳನ್ನು ಆರೋಪಿಗಳು ರಹಿಮಾನ್ ನಿಂದ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 363, 323, 504, 392, 383, 506 ಜೊತೆಗೆ 34 ಐ.ಪಿ.ಸಿ ಮತ್ತು 66ಇ & 67 ಐ.ಟಿ ನಂತೆ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications