ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಅರ್ಜುನ್ ಸರ್ಜಾ ಭೇಟಿ ನೀಡಿದ್ದು ಯಾಕೆ?
ಬೆಳ್ತಂಗಡಿ, ನವೆಂಬರ್, 05: ಚಲನಚಿತ್ರ ನಟ ಅರ್ಜುನ್ ಸರ್ಜಾ ಅವರು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಹಿತ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅರ್ಜುನ್ ಸರ್ಜಾ ಅವರ 'ಗೇಮ್' ಚಲನಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಜೊತೆಯಲ್ಲಿ ಪತ್ನಿ ಆಶಾರಾಣಿ, ಪುತ್ರಿ ಐಶ್ವರ್ಯಾ, ಅತ್ತೆ ಗೀತಾ, ನಿರ್ದೇಶಕ ಎ.ಎಂ.ಆರ್. ರಮೇಶ್, ಸಹ ನಿರ್ಮಾಪಕ ಧನಂಜಯ, ದೇಶರಾಜ್, ದೇಗುಲದ ಶಿಷ್ಟಚಾರ ಅಧಿಕಾರಿ ವೆಂಕಟ್ ರಾಜ್, ತಿಮ್ಮಪ್ಪ ಪುತ್ತೂರು, ಪ್ರಸಾದ್, ರಮೇಶ್ ಮುಂತಾದವರು ಇದ್ದರು.[ಧರ್ಮಸ್ಥಳ ದೇವಾಲಯ ವಶ ಪಡಿಸಿಕೊಳ್ಳಲು ಹೊರಟಿತ್ತೇ ಸರಕಾರ?]

ಧರ್ಮಸ್ಥಳ ಭೇಟಿ
ಸುಬ್ರಹ್ಮಣ್ಯ ಭೇಟಿ ಬಳಿಕ ಅರ್ಜುನ್ ಸರ್ಜಾ ಅವರು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಆಗಮಿಸಿದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಬಳಿಕ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಹೊಸೋಳಿಗಮ್ಮ ಗುಡಿ ಹಾಗೂ ಆದಿಸುಬ್ರಹ್ಮಣ್ಯ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು.[ವೀರೇಂದ್ರ ಹೆಗ್ಗಡೆಯವರ ಮೇಲೆ ಮತ್ತೇನಿದು ಗಂಭೀರ ಆರೋಪ !]
ನವೆಂಬರ್ 27: 'ಗೇಮ್' ಚಲನಚಿತ್ರ ತೆರೆಗೆ
ಅರ್ಜುನ್ ಸರ್ಜಾ ಅವರು "ಗೇಮ್' ಕನ್ನಡ ಚಲನಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದು, ನ. 27ರಂದು ತೆರೆ ಕಾಣಲಿದೆ. 'ಪಾತಕ ಲೋಕಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಹೊಂದಿದ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿರುವ ಕಮರ್ಷಿಯಲ್ ಚಲನಚಿತ್ರ ಇದಾಗಿದೆ.
ಈಗಾಗಲೇ ಅಟ್ಟಹಾಸ, ಸೈನೈಡ್ ಮುಂತಾದ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿರುವ ನಿರ್ಮಾಪಕ ಎಂ.ಆರ್. ರಮೇಶ ಈ ಚಲನಚಿತ್ರ ನಿರ್ಮಿಸಿದ್ದಾರೆ. ಸಹ ನಿರ್ಮಾಣದಲ್ಲಿ ದೇಶರಾಜ್, ಧನಂಜಯ ಸಹಕರಿಸಿದ್ದಾರೆ. ಚಿತ್ರದಲ್ಲಿ ಮನಿಷಾ ಕೊಯಿರಾಲಾ ನಾಯಕಿಯಾಗಿ ನಟಿಸಿದ್ದಾರೆ ಎಂದು ಅರ್ಜುನ್ ಸರ್ಜಾ ಅವರು ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.[ಅರ್ಜುನ್ ಸರ್ಜಾ, ಮನಿಷಾ 'ಗೇಮ್ ಟ್ರೈಲರ್ ನೋಡಿದ್ರಾ?]
ಕನ್ನಡದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಚಲನಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು. ತುಳು ಚಿತ್ರರಂಗದ ಬಗ್ಗೆ ಕೇಳಿದ ಪ್ರಶ್ನೆಗೆ ತುಳು ಚಿತ್ರರಂಗ ಕೂಡ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.












Click it and Unblock the Notifications