ಮಂಗಳೂರು ದಸರಾ: ಶಾರದಾ ಮಾತೆ ಪ್ರತಿಷ್ಠಾಪನೆ
ಮಂಗಳೂರು, ಅ.6: ಇಲ್ಲಿನ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ನವರಾತ್ರಿ ಉತ್ಸವಕ್ಕೆ ಗಣಪತಿ, ನವದುರ್ಗೆಯರ ಹಾಗೂ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಶರವನ್ನವರಾತ್ರಿ ಉತ್ಸವದ ಅಂಗವಾಗಿ ಪ್ರಥಮ ಬಾರಿಗೆ ಇಬ್ಬರು ವಿಧವೆಯವರು ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಿ ಹೊಸ ಕ್ರಾಂತಿ ಹುಟ್ಟು ಹಾಕಿದ್ದಾರೆ.
ಬಿಲ್ಲವ ಸಮಾಜದ ಗುರು ಬ್ರಹ್ಮಶ್ರೀ ನಾರಾಯಣ ಗುರು 1912ರಲ್ಲಿ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಇರುವ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿ ನಂತರ ಅನ್ನಪೂರ್ಣೇಶ್ವರಿ ಗುಡಿಗೆ ಪ್ರವೇಶ ಮಾಡಿ ಅಲ್ಲಿ ಪೂಜೆ ಸಲ್ಲಿಸಿದರು. ತದನಂತರ ಅಶ್ವತ್ಥ ಮರದ ಕೆಳಗೆ ಸ್ಥಾಪಿಸಲಾಗುವ ದತ್ತಾತ್ರೇಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.
ಕುದ್ರೋಳಿ ದೇಗುಲದಲ್ಲಿ ಸಾಂಪ್ರದಾಯಿಕ ಚೆಂಡೆವಾದನ, ಹುಲಿ ವೇಷದ ಮೆರವಣಿಗೆಯೊಂದಿಗೆ ಶಾರದಾ ಮಾತೆಯ ವಿಗ್ರಹ, ಗಣಪತಿ, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಪ್ರಭಾ, ಕುಶ್ಮಾಂಡಿನಿ, ಸ್ಕಂದಪುತ್ರಿ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿ ದಾತ್ರಿಯರ ವಿಗ್ರಹಗಳನ್ನು ಧಾರ್ಮಿಕ ಪೂಜಾವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಮಹಾಪೂಜೆ ನಡೆಸಲಾಯಿತು. ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಉದ್ಯಮಿ ರಮೇಶ್ ಕುಮಾರ್, ಊರ್ಮಿಳಾ ರಮೇಶ್ ಕುಮಾರ್, ಸಾವಿತ್ರಿ ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಮಂಗಳೂರು ದಸರಾ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ, ಜನಾರ್ದನ ಪೂಜಾರಿ ಅವರ ಕ್ರಾಂತಿ ವಿವರಗಳನ್ನು ಮುಂದೆ ಓದಿ.. ನಮ್ಮ ಕುಡ್ಲ ಓದುಗರು ದೇಗುಲಗಳಲ್ಲಿನ ದಸರಾ ಸಂಭ್ರಮ ಆಚರಣೆ ಚಿತ್ರಗಳನ್ನು ನಮಗೆ ಕಳಿಸಲು ಇಲ್ಲಿದೆ ಇಮೇಲ್ ಐಡಿ

ದಸರಾ ಉದ್ಘಾಟನೆ
ಚಿತ್ರ ಕೃಪೆ : ಪ್ರೇಮ್ ಕುಡ್ವ. ದಸರಾ ಹಾಗೂ ಕುದ್ರೋಳಿ ಕ್ಷೇತ್ರದ 101ನೆ ವಾರ್ಷಿಕ ಉತ್ಸವಕ್ಕೆ ಅ.10ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದಾರೆ ಎಂದು ದೇವಳ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ಮತ್ತೊಮ್ಮೆ ತಿಳಿಸಿದರು.ಹೆಚ್ಚಿನ ವಿವರ ಇಲ್ಲಿದೆ ಓದಿ

ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.5ರಿಂದ ಅ.14ರ ತನಕ ವೈಭವದ ದಸರಾ ಮೆರವಣಿಗೆ ನಗರದಲ್ಲಿ ನಡೆಯಲಿದೆ. ಉತ್ಸವದ ಅಂಗವಾಗಿ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ಪ್ರತಿದಿನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಅ.15ರವರೆಗೆ ನಡೆಯಲಿವೆ.
ಚಿತ್ರದಲ್ಲಿ : ಸರಸ್ವತಿ ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತಿರುವ ಭಕ್ತಾದಿಗಳು. ಚಿತ್ರ: ಪಿಟಿಐ
ಜನಾರ್ಧನ ಪೂಜಾರಿ ಕ್ರಾಂತಿ
ಮಹಿಳೆಯರಿಗೆ ಗೌರವ ದೇವರಿಗೆ ಲಿಂಗಭೇದವಿಲ್ಲ. ಮಹಿಳೆಯರಿಗೂ ದೇವರನ್ನು ಪೂಜಿಸುವ ಹಕ್ಕಿದೆ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆ ಇರಬೇಕು. ಈ ಸದುದ್ದೇಶಕ್ಕಾಗಿ ಈ ಬಾರಿಯ ನವರಾತ್ರಿ ಉತ್ಸವದ ಸಮಯದಲ್ಲಿ ಇಬ್ಬರು ವಿಧವೆಯರನ್ನು ಅರ್ಚಕರಾಗಿ ನೇಮಿಸುತ್ತಿದ್ದೇವೆ. ಇವರು ಶಾಶ್ವತವಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಪೂಜೆ ಸಲ್ಲಿಸಲಿದ್ದಾರೆ

ದಸರಾ ಆಕರ್ಷಣೆ
ಚಿತ್ರ ಕೃಪೆ : ತನುಜಾ ಆರ್.ವೈ. ಈ ಬಾರಿ ಮಂಗಳೂರು ದಸರಾ ಮೆರವಣಿಗೆ ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ರಾಜ್ಯದ ವಿವಿಧ ತಂಡಗಳು ಹಾಗೂ ರಾಷ್ಟ್ರ ಮಟ್ಟದ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ. ಶಂಕರ್ ಶ್ಯಾನಭೋಗ್, ಪುತ್ತೂರು ನರಸಿಂಹ ನಾಯಕ್, ಪಲ್ಲವಿ ಪ್ರಭು ಮೊದಲಾದ ಕಲಾವಿದರು ಭಾಗವಹಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಇನ್ನು ಕೆಲವು ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.












Click it and Unblock the Notifications