ಸಿಎಲ್ 5 ಪರವಾನಗಿ ಪಡೆಯುವಲ್ಲಿ ದಕ್ಷಿಣ ಕನ್ನಡ ನಂ 1
ಮಂಗಳೂರು, ಜನವರಿ 02: ಔತಣ ಕೂಟ, ಹುಟ್ಟು ಹಬ್ಬ ಸೇರಿದಂತೆ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಮದ್ಯ ವಿತರಣೆ ಮಾಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಉಡುಪಿ 2ನೇ ಸ್ಥಾನದಲ್ಲಿದೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ 2017 - 18ನೇ ಸಾಲಿನಲ್ಲಿ ಮದ್ಯ ವಿತರಣೆಗೆ ರಾಜ್ಯದಲ್ಲೇ ಗರಿಷ್ಠ 248 ಪರವಾನಗಿ ನೀಡಲಾಗಿದ್ದು, ಉಡುಪಿ ಜಿಲ್ಲೆಗೆ 122 ಪರವಾನಗಿ ನೀಡಲಾಗಿದೆ.
ಯಾವುದೇ ಸಭಾಭವನದ ಸಮಾರಂಭದಲ್ಲಿ ಮದ್ಯ ವಿತರಣೆ ಮಾಡಬೇಕಿದ್ದರೆ 'ಸಿಎಲ್ 5 ' ಸಾಂದರ್ಭಿಕ ಪರವಾನಗಿ ಪಡೆಯುವುದು ಕಡ್ಡಾಯ. ಮನೆಯಲ್ಲೇ ದೊಡ್ಡ ಮಟ್ಟದ ಪಾರ್ಟಿ ನಡೆಸುವುದಿದ್ದರೂ ಈ ಪರವಾನಗಿ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಕಾನೂನಿನಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾನೂನಿನಂತೆ ಪರವಾನಿಗೆ ಪಡೆಯಲಾಗಿದೆ.
ಆದರೆ ಮಂಡ್ಯ, ಕೋಲಾರ, ಹಾವೇರಿ, ದಾವಣಗೆರೆ ಸಹಿತ 13 ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಯಾವುದೇ ಸಮಾರಂಭಗಳಲ್ಲಿ ಮದ್ಯ ವಿತರಣೆ ನಡೆದಿಲ್ಲ. ಅಬಕಾರಿ ಇಲಾಖೆ ಜಿಲ್ಲಾವಾರು ನೀಡಿದ ಸಿಎಲ್-5 ಸಾಂದರ್ಭಿಕ ಪರವಾನಗಿಯ ವಾರ್ಷಿಕ ಅಂಕಿ ಅಂಶದಲ್ಲಿ ಈ ಮಾಹಿತಿ ಸ್ಪಷ್ಟವಾಗಿದೆ. ಹಾಗೆಂದು ಈ ಜಿಲ್ಲೆಗಳ ಸಮಾರಂಭಗಳಲ್ಲಿ ಮದ್ಯ ವಿತರಣೆಯಾಗಿಲ್ಲವೇ? ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರವನ್ನು ಅಬಕಾರಿ ಇಲಾಖೆ ಒಟ್ಟು 5 ಅಬಕಾರಿ ಜಿಲ್ಲೆಗಳಾಗಿ ವಿಂಗಡಿಸಿದೆ. ಈ ಐದು ಜಿಲ್ಲೆಗಳಲ್ಲಿ 2017-18 ಸಾಲಿನಲ್ಲಿ ಪಡೆದ ಒಟ್ಟು ಪರವಾನಗಿ 282 ಮಾತ್ರ. ಉಡುಪಿ ಜಿಲ್ಲೆಯಲ್ಲಿ 122, ಕೊಡಗಿನಲ್ಲಿ 52, ಚಿಕ್ಕಮಗಳೂರಿನಲ್ಲಿ 12, ಬೆಳಗಾವಿಯಲ್ಲಿ 11 ಪರವಾನಗಿ ವಿತರಣೆಯಾಗಿದೆ.
ಸಿಎಲ್ 5 ಪರವಾನಗಿ ಪಡೆದವರು ಸ್ವಂತ ಬಳಕೆಗೆ 18.2 ಲೀಟರ್. ದೇಶಿ ಬಿಯರ್, 2.3 ಲೀಟರ್. ಮದ್ಯ ದಾಸ್ತಾನು ಇಡಬಹುದು. ಮದುವೆ ಸಹಿತ ಸಮಾರಂಭಗಳಲ್ಲಿ ಮದ್ಯ ವಿತರಣೆ ಮಾಡಬೇಕಿದ್ದರೆ ಅಬಕಾರಿ ಇಲಾಖೆಯಿಂದ ಪ್ರತ್ಯೇಕವಾಗಿ ಸಿಎಲ್ 5 ಸಾಂದರ್ಭಿಕ ಪರವಾನಗಿ ಪಡೆಯಬೇಕು. 11,500 ರೂಪಾಯಿ ಶುಲ್ಕ ಪಾವತಿಸಿ ಪಡೆಯುವ ಈ ಪರವಾನಗಿಯ ಅವಧಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ.












Click it and Unblock the Notifications