ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾರ್ ನ ಹಿಂಬಾಗಿಲಿನಿಂದ ಮದ್ಯ ಮಾರಾಟ
ಮಂಗಳೂರು, ಜುಲೈ 3: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಾರ್, ವೈನ್ ಶಾಪ್ ಗಳಿಗೆ ಬೀಗ ಮುದ್ರೆ ಬಿದ್ದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಬಾರ್ ಗಳ ಮುಂಭಾಗಕ್ಕೆ ಮಾತ್ರ ಬೀಗ ಬಿದ್ದಿದ್ದು,ಹಿಂಭಾಗದಲ್ಲಿ ವ್ಯವಹಾರ ಸರಾಗವಾಗಿ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುತ್ತೂರು ತಾಲೂಕಿನ ನೆಲ್ಯಾಡಿಯ ಕ್ಲಾಸಿಕ್ ವೈನ್ ಶಾಪ್ ನಲ್ಲಿ ಹಿಂಬಾಗಿಲಿನ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದೆ.

ವೈನ್ ಶಾಪ್ ಮುಂಭಾಗದಿಂದ ಹಿಂಭಾಗಕ್ಕೆ ಹೋಗಲು ವಿಶೇಷ ದಾರಿ ಸೌಲಭ್ಯ ಮಾಡಲಾಗಿದೆ ಹಾಗೆಯೇ ಬೆಳ್ತಂಗಡಿಯ D K ಬಾರ್ ಅಂಡ್ ರೆಸ್ಟೋರೆಂಟ್ ನಲ್ಲೂ ಕೂಡ ವಿಶೇಷ ದಾರಿ ಸೌಲಭ್ಯ ಮಾಡಿ ಮದ್ಯ ಮಾರಲಾಗುತ್ತಿದೆ. ಇವು ಪ್ರಭಾವೀ ಉದ್ಯಮಿಗಳ ಒಡೆತನದ ಬಾರ್ ಗಳಾಗಿದ್ದು ಮಾಹಿತಿ ಇದ್ದರು ಕೂಡ ಕ್ರಮ ಕೈಗೊಳ್ಳಲು ಮುಂದಾಗದ ಪೊಲೀಸ್ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಇನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಅಂತರದ ಒಳಗಡೆ ಇರುವ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದರಂತೆ ಜಿಲ್ಲೆಯಲ್ಲಿ ನೋಟಿಫಿಕೇಶನ್ ಆಗದ ಬಾರ್ ಗಳನ್ನು ಜೂನ್ 30ರ ರಾತ್ರಿಯಿಂದಲೇ ಮುಚ್ಚುವಂತೆ ಅಧಿಕಾರಿಗಳು ಬಾರ್ ಮಾಲೀಕರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಈ ನಿಟ್ಟಿನಲ್ಲಿ ಕಾರ್ಯಚರಣೆ ಆರಂಭಿಸಿದ್ದಾರೆ.

ಜುಲೈ 1 ರಿಂದ ನಗರ ಸೇರಿದಂತೆ ಎಲ್ಲಾ ಭಾಗಗಳಲ್ಲಿ ಮದ್ಯದಂಗಡಿಗಳನ್ನು ಸಂಪೂರ್ಣ ಸ್ಥಗಿತಗೊಳಿಸುವ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲೆಯ ಒಟ್ಟು 10 ವಲಯಗಳ ತಂಡಗಳು ಭಾಗವಹಿಸಲಿದೆ.
ಈಗಾಗಲೇ ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿ, ಜಿಲ್ಲೆಯ 453 ಮದ್ಯದಂಗಡಿಗಳಲ್ಲಿ 254ಕ್ಕೆ ಲೈಸೆನ್ಸ್ ನವೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಲೈಸೆನ್ಸ್ ದಾರರು ಈಗಾಗಲೇ ಚಲನ್ ಕಟ್ಟಿ ನವೀಕರಣ ಮಾಡಿಸಿಕೊಂಡಿದ್ದಾರೆ. ನೋಟಿಫಿಕೇಶನ್ ನಲ್ಲೂ ನಗರದ ಬಾರ್ ಗಳಿಗೆ ಅನುಮತಿ ಸಿಕ್ಕಿಲ್ಲ. ಗ್ರಾಮಾಂತರ ಪ್ರದೇಶದ ಬಾರ್ ಗಳಿಗೆ ಮಾತ್ರ ದಕ್ಕಿದ್ದು, ಇದರಿಂದ ಈ ಬಾರ್ ಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications