ಕುಂದಾಪುರದಲ್ಲಿ ಹಾಡಹಗಲೇ ರೌಡಿಸಂ, ಸಿನಿಮೀಯ ರೀತಿಯಲ್ಲಿ ಬಡಿದಾಡಿಕೊಂಡ ವಿದ್ಯಾರ್ಥಿಗಳು
ಉಡುಪಿ ಜನವರಿ 29: ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ನಿನ್ನೆ ಸೋಮವಾರ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು ಸಿನಿಮೀಯ ರೀತಿಯಲ್ಲಿ ರಾಡ್ ಹಿಡಿದುಕೊಂಡು ರಸ್ತೆಯಲ್ಲಿ ರೌಡಿಗಳಂತೆ ಬಡಿದಾಡಿಕೊಂಡಿದ್ದಾರೆ.
ಜನವರಿ 26ರ ತಡರಾತ್ರಿ ಕೋಟದಲ್ಲಿ ಯುವಕರಿಬ್ಬರ ಭೀಕರ ಹತ್ಯೆ ಪ್ರಕರಣದ ಬಳಿಕ ಕುಂದಾಪುರದಲ್ಲಿ ಭಂಡಾರ್ ಕಾರ್ಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಲ್ಲೆ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಂಡಾರ್ ಕಾರ್ಸ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗಣೇಶ್ ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದ ಬೇರೆ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು , ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಾಡಹಗಲೇ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಭಂಡಾರ್ ಕಾರ್ಸ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ ಗಂಭೀರ ಗಾಯಗೊಂಡವರು.
ಗಣೇಶ್ ಹಾಗೂ ಮಿಥುನ್ ಮತ್ತು ಅಕ್ಷಯ ನಡುವೆ ಮೊದಲಿನಿಂದಲೂ ವೈಷಮ್ಯವಿತ್ತು ಎಂದು ಹೇಳಲಾಗಿದೆ. ಗಣೇಶ್‌ಗೆ ಈ ಹಿಂದೆ ಅಕ್ಷಯ್ ಮತ್ತು ಮಿಥುನ್ ತಂಡದಿಂದ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಗಣೇಶ್ ತನ್ನ ಸಹಚರರೊಂದಿಗೆ ಸೋಮವಾರ ಮಧ್ಯಾಹ್ನ ಮಿಥುನ್ ಮತ್ತು ಅಕ್ಷಯ್ ಮೇಲೆ ರಾಡ್ ನಿಂದ ದಾಳಿ ನಡೆಸಿದ್ದಾರೆ.
ಘಟನೆ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.












Click it and Unblock the Notifications