ಸಿಎಂ ಬೊಮ್ಮಾಯಿ ರಾಜ್ಯವನ್ನು ಗೂಂಡಾಗಳ ಕೈಗೆ ನೀಡಿದ್ದಾರೆ; ಯು.ಟಿ. ಖಾದರ್
ಮಂಗಳೂರು, ಏಪ್ರಿಲ್ 11: "ರಾಜ್ಯದಲ್ಲಿ ಹಿಂಸಾತ್ಮಕ, ಕೋಮು ಪ್ರಚೋದನಾತ್ಮಕ ಘಟನೆಗಳು ನಡೆಯುತ್ತಿದ್ದರೂ, ಸಿಎಂ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ. ಸಿಎಂ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ," ಎಂದು ಮಾಜಿ ಸಚಿವ, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ ಇದೆ. ವಿಶ್ವದಲ್ಲಿ ಬೆಂಗಳೂರಿಗೆ ಶಾಂತಿಯುತ ನಗರ ಎಂಬ ಹೆಸರು ಕೂಡ ಇದೆ. ಬಿಜೆಪಿ ಸರಕಾರದಿಂದ ರಾಜ್ಯದ ಗೌರವ, ಘನತೆಗೆ ಚ್ಯುತಿ ಉಂಟಾಗಿದೆ," ಎಂದು ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಕಲ್ಲಂಗಡಿ ಧ್ವಂಸ ಪ್ರಕರಣವನ್ನು ಎಲ್ಲರೂ ಖಂಡಿಸಿದ್ದಾರೆ. ಅಲ್ಲದೇ ದೇಗುಲದ ಅರ್ಚಕರು ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಸಹಿಸಲು ಅಸಾಧ್ಯವಾದ ಘಟನೆ. ಇಂತಹ ಕೃತ್ಯವನ್ನು ಕ್ರೂರಿ ಮನಸ್ಸುಗಳು ಮಾಡುತ್ತಿದ್ದಾರೆ. ಇಂತಹ ಘಟನೆಯನ್ನು 90 ಶೇಕಡಾ ಜನರು ಸರ್ವಧರ್ಮೀಯರು ಒಪ್ಪುವುದಿಲ್ಲ. ಮುಂದೆ ಇಂತಹ ವಿಚಾರಗಳೇ ಸರಕಾರಕ್ಕೆ ತಿರುಗುಬಾಣ ಆಗುತ್ತದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

"ರಾಜ್ಯ ಸರಕಾರಕ್ಕೆ ನಾವೇನು ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದು ಹೇಳುವುದು ಅವರಿಗೆ ಆಗುತ್ತಿಲ್ಲ. ಈ ವಿಚಾರದಲ್ಲಿ ಅವರು ದಿವಾಳಿಯಾಗಿದ್ದಾರೆ. ಹೀಗಾಗಿ ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಸರ್ಕಾರ ಪ್ರಚೋದನೆ ನೀಡುತ್ತಿದೆ," ಎಂದು ಆರೋಪಿಸಿದ್ದಾರೆ.
"ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತ ಆಗುತ್ತಿದ್ದರೂ ಸಿಎಂ ಬೊಮ್ಮಾಯಿ ಮೌನವಾಗಿದ್ದಾರೆ. ಜನರಿಗೆ ಸಿಎಂ ಆತ್ಮವಿಶ್ವಾಸ ಕೂಡಾ ಕೊಡುತ್ತಿಲ್ಲ. ಅಲ್ಲದೇ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಮಾಡುವವರ ವಿರುದ್ಧ ಮಾತನಾಡುತ್ತಿಲ್ಲ. ಈ ಮೂಲಕ ಸಿಎಂ ರಾಜ್ಯವನ್ನು ಗುಂಡಾಗಳ ಕೈಯಲ್ಲಿ ಕೊಟ್ಟಿದ್ದಾರೆ. ಕೂಡಲೇ ಈ ಬಗ್ಗೆ ಸಿಎಂ ಮಾತನಾಡಬೇಕು," ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ಇತಿಹಾಸ ಸಂಸ್ಕೃತಿ ಇದೆ. ಬಿಜೆಪಿಯಿಂದ ಈ ರಾಜ್ಯದ ಘನತೆಗೆ ಕಪ್ಪು ಚುಕ್ಕೆಯಾಗಿದೆ. ಶೇ.95ರಷ್ಟು ಜನರು ಈ ಬೆಳವಣಿಗೆಯ ಬಗ್ಗೆ ಸರ್ಕಾರವನ್ನು ತಿರಸ್ಕಾರ ಮಾಡುತ್ತಾರೆ. ರಾಜ್ಯವನ್ನು ಗೂಂಡಾಗಳು ಆಳುತ್ತಿದ್ದಾರೆ. ಈ ಬೆಳವಣಿಗೆಗೆ ಕಡಿವಾಣ ಹಾಕುವ ಜವಾಬ್ದಾರಿ ಯಾರದ್ದು? ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಲೇಬೇಕು ಎಂದು ಒತ್ತಾಯಿಸಿದರು.

ಕೋಮುವಾದಿಗಳ ವಿವಾದವನ್ನು ಸರ್ಕಾರ ಮಟ್ಟಹಾಕಬೇಕು. ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದೆ. ಕೋಮುವಾದಿಗಳ ಅಜೆಂಡಾವನ್ನು ಸಫಲವಾಗುವುದಕ್ಕೆ ಸರ್ಕಾರ ಬಿಡಬಾರದು. ಕೋಮುವಾದಿಗಳು ಸೃಷ್ಟಿಸುವ ವಿವಾದಕ್ಕೆ ಯಾರೂ ತಾಳ್ಮೆಗೆಡಬಾರದು ಅಂತಾ ಮಂಗಳೂರಿನಲ್ಲಿ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೂರಿರುವ ಮರಳುಗಾರಿಕೆ ಸಮಸ್ಯೆ ಬಗ್ಗೆ ಮಾತನಾಡಿದ ಯು.ಟಿ. ಖಾದರ್, ಜಿಲ್ಲೆಯ ಮರಳುಗಾರಿಕೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸರ್ಕಾರದ ನಿರ್ಲಕ್ಷ್ಯ ಮತ್ತು ವೈಫಲ್ಯದಿಂದ ಜನ ಕಷ್ಟ ಉಂಟಾಗಿದೆ. ಸಣ್ಣ ಮನೆ ಕಟ್ಟಲೂ ಪರದಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ಇದ್ದಾಗ ಸ್ಯಾಂಡ್ ಬಝಾರ್ ಆ್ಯಪ್‌ನಲ್ಲಿ ಮರಳು ಪೂರೈಕೆಯಾಗುತಿತ್ತು. ಈಗ ಮೂರು ಪಟ್ಟು ಹಣ ಕೊಟ್ಟು ಮರಳು ತರಬೇಕಿದೆ ಎಂದರು.
ಸರ್ಕಾರ ಜನರಿಗೆ ಮರಳನ್ನು ಫ್ರೀಯಾಗಿ ತೆಗೆದುಕೊಳ್ಳುವುದಕ್ಕೆ ಹೇಳಲಿ. ಕೆಲವರಿಗೆ ಮರಳುಗಾರಿಕೆಗೆ ಅನುಮತಿ ನೀಡಿದೆ. ಇನ್ನೂ ಹಲವು ಮಂದಿಗೆ ಅವಕಾಶ ಇಲ್ಲ. ಆಗಸ್ಟ್‌ನಲ್ಲಿ ಬಂದ್ ಆಗಿರುವ ಸಿಆರ್ ಝೆಡ್ ಇನ್ನೂ ಓಪನ್ ಆಗಿಲ್ಲ. ಮಳೆಗಾಲದಲ್ಲಿ ಮರಳು ತೆಗೆಯಲು ಸಾಧ್ಯವಾಗಲಿಲ್ಲ. ರಾಜ್ಯ ಸರ್ಕಾರಕ್ಕೆ ಅಪಾರ ರಾಜಸ್ವ ನಷ್ಟವಾಗಿದೆ. ಕರಾವಳಿಯ ಮರಳಿನಿಂದ ಸಿಗುತ್ತಿದ್ದ ರಾಜಸ್ವ ಬಗ್ಗೆ ಸರ್ಕಾರ ಮಾಹಿತಿ ನೀಡಲಿ ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.












Click it and Unblock the Notifications