ಪ್ರೇಮ ವೈಫಲ್ಯ : ಯುವತಿಗೆ ಚಾಕು ಇರಿದು ಕೊಂದ ಆರೋಪಿ ಬಂಧನ
ಮಂಗಳೂರು, ಜನವರಿ 18: ಮನೆಯಲ್ಲಿ ಏಕಾಂಗಿಯಾಗಿದ್ದ ಯುವತಿಯನ್ನು ಪಾಗಲ್ ಪ್ರೇಮಿ ಚೂರಿಯಿಂದ ಇರಿದು ಹತ್ಯೆ ಮಾಡಿದ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಎಂಬಲ್ಲಿ ನಡೆದಿದೆ.
ಕೃತ್ಯ ಎಸಗಿದ ಪಾಗಲ್ ಪ್ರೇಮಿ ಉಮೇಶ್ ನನ್ನು ಪೊಲೀಸರು ಘಟನೆ ನಡೆದ ಎಂಟು ಗಂಟೆಯೊಳಗೆ ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಯುವತಿ ಜಯಶ್ರೀ( 23) ಎಂದು ಗುರುತಿಸಲಾಗಿದೆ.
ಮೃತ ಜಯಶ್ರೀ ಎರಡು ವರ್ಷಗಳಿಂದ ದೂರ ಸಂಬಂಧಿಯಾಗಿದ್ದ ಉಮೇಶ್‌ನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಉಮೇಶ್ ನಡವಳಿಕೆ ಸರಿ ಕಾಣದ ಹಿನ್ನಲೆಯಲ್ಲಿ ಕಳೆದ ನವೆಂಬರ್‌ನಿಂದ ಉಮೇಶ್‌ನಿಂದ ಅಂತರ ಕಾಯ್ದುಕೊಂಡಿದ್ದಳು. ಕಳೆದ ಎರಡು ತಿಂಗಳಿನಿಂದ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇದ್ದಳು. ಮಂಗಳವಾರ ಜಯಶ್ರೀ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂಧರ್ಭದಲ್ಲಿ ಮನೆಗೆ ನುಗ್ಗಿದ್ದ ಉಮೇಶ್ ,ಜಯಶ್ರೀ ಹೊಟ್ಟೆಗೆ ಮೂರು ಬಾರಿ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾನೆ.

2 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಜಯಶ್ರೀ ತಾಯಿಯೊಂದಿಗೆ ಮನೆಯಲ್ಲಿ ವಾಸವಿದ್ದಳು. ಸಹೋದರ ಮಂಗಳೂರಿನಲ್ಲಿ ವ್ಯಾಸಂಗ ಮಾಡ್ತಿದ್ದ.ಘಟನೆಯ ದಿನ ತಾಯಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು.ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಉಮೇಶ್, ಮನೆಗೆ ನುಗ್ಗಿದ ಚಾಕುವಿನಿಂದ ಮೂರು ಬಾರಿ ಜಯಶ್ರೀಗೆ ಇರಿದಿದ್ದಾನೆ. ಚೂರಿಯನ್ನು ಆಕೆಯ ಹೊಟ್ಟೆಯಲ್ಲಿಯೇ ಬಿಟ್ಟು ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಮಲಗಿದ್ದ ಜಯಶ್ರೀಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೆ ಆಕೆ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ. ಜಯಶ್ರೀ ತಾಯಿ ಆರಂಭದ ಹಂತದಲ್ಲೇ ಉಮೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಇದೇ ಆಧಾರದಲ್ಲಿ ತನಿಖೆಗೆ ಇಳಿದ ಪೊಲೀಸರು ಕೇವಲ ಎಂಟು ಗಂಟೆಯೊಳಗೆ ಆರೋಪಿ ಉಮೇಶ್ ನನ್ನು ಪುತ್ತೂರು ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಜಯಶ್ರೀ ಕೊಲೆಯ ಬಗ್ಗೆ ಪೊಲೀಸರು ಹೇಳಿದ್ದೇನು..?
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, "ಜಯಶ್ರೀ ತಾಯಿ ಗಿರಿಜಾ ಅವರು ದೂರು ನೀಡಿದ ಆಧಾರದಲ್ಲಿ ಉಮೇಶ್ ಮೇಲೆ ಸಂಶಯಗೊಂಡು ತನಿಖೆ ಆರಂಭಿಸಿದ್ದೆವು. ಉಮೇಶ್ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ. ಪೊಲೀಸ್ ತಂಡ ಕ್ಷ್ರಿಪ್ರ ಕಾರ್ಯಾಚರಣೆ ನಡೆಸಿ, ಉಮೇಶ್‌ನನ್ನು ಪುತ್ತೂರು ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದೆ. ಆತನನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಮಂಗಳವಾರ ಬೆಳಗ್ಗೆ ತನ್ನ ಅಕ್ಟೀವಾ ವಾಹನದಲ್ಲಿ ಉಮೇಶ್ ಜಯಶ್ರೀ ಮನೆ ಬಳಿ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಖಚಿತಪಡಿಸಿ ಮನೆಯೊಳಗೆ ನುಗ್ಗಿದ್ದಾನೆ. ಅಡುಗೆ ಮನೆಯಲ್ಲಿದ್ದ ಜಯಶ್ರೀಯನ್ನು ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಅಡುಗೆಗೆ ಬಳಸುವ ಚೂರಿಯಿಂದ ಮೂರು ಬಾರಿ ಜಯಶ್ರೀ ಹೊಟ್ಟೆಗೆ ತಿವಿದಿದ್ದಾನೆ. ಬಳಿಕ ಸ್ಥಳದಿಂದ ತಪ್ಪಿಸಿಕೊಂಡಿದ್ದ ಎಂದು ಎಸ್ಪಿ ಸೋನಾವಣೆ ಹೇಳಿದ್ದಾರೆ.
ನವೆಂಬರ್ ತಿಂಗಳಲ್ಲಿ ಜಯಶ್ರೀ ಬ್ರೇಕ್ ಅಪ್ ಮಾಡಿಕೊಂಡಿದ್ದಳು.ಇದರಿಂದ ಕೋಪಗೊಂಡ ಉಮೇಶ್ ತಿಂಗಳಿನಿಂದ ಕೊಲೆಗೆ ಸಂಚು ರೂಪಿಸಿದ್ದ. ಪುರುಷಕರ ಕಟ್ಟೆ ಎಂಬಲ್ಲಿನ ಅಂಗಡಿಯಿಂದ ತಿಂಗಳ ಹಿಂದೆಯೇ ಚೂರಿಯನ್ನು ಖರೀದಿ ಮಾಡಿದ್ದ. ಪ್ಲಾನ್‌ನಂತೆಯೇ ಮಂಗಳವಾರ ಕೃತ್ಯ ಎಸಗಿದ್ದಾನೆ. ಪೊಲೀಸರು ಹುಡುಕುವ ಭಯದಿಂದ ಬೇರೆ ಕಡೆ ಹೋಗಲು ಪುತ್ತೂರು ಬಸ್ ನಿಲ್ದಾಣಕ್ಕೆ ತೆರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications