ಮಂಗಳೂರು ಇನ್ಫೋಸಿಸ್ ಗೆ ಬಾಂಬ್ ಬೆದರಿಕೆ
ಮಂಗಳೂರು, ಸೆ.26 : ಮಂಗಳೂರಿನ ಊರ್ವಾ ಸ್ಟೋರ್ ಬಳಿ ಇರುವ ಇನ್ಫೋಸಿಸ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದ ಗಾಬರಿಗೊಂಡ ಕಚೇರಿಯ ಸಿಬ್ಬಂದಿ ಹೊರಗೋಡಿ ಬಂದಿದ್ದಾರೆ. ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲಿಸರು ಆಗಮಿಸಿದ್ದು ಬಾಂಬ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಬಾಂಬ್ ಬೆದರಿಕೆ ಕರೆ ಮಂಗಳೂರಿನ ಕೋಟಿ ಪ್ರಸಾದ್ ಆಳ್ವಾ ಅವರ ಮನೆಯಿಂದ ಬಂದಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೋಟಿ ಪ್ರಸಾದ್ ಅವರ ಮನೆಗೆ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಕೋಟಿ ಪ್ರಸಾದ್ ಅವರ ಮನೆಯಿಂದ 1 ಗಂಟೆ ಸುಮಾರಿಗೆ ಈ ಕರೆ ಇನ್ಫೋಸಿಸ್ ಕಚೇರಿಗೆ ಬಂದಿದೆ. ತಕ್ಷಣ ಕರೆಯ ಮಾಹಿತಿ ಸಂಗ್ರಹಿಸಿದ ಪೊಲೀಸರು ಅವರ ಮನೆಗೆ ತೆರಳಿದ್ದಾರೆ. ಆದರೆ, ಮನೆಯವರಿಗೆ ಈ ಕರೆಯ ಕುರಿತು ಯಾವುದೇ ಮಾಹಿತಿಯೇ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಎಸಿಪಿ ಕವಿತಾ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. 5 ಮಂದಿಯ ಬಾಂಬ್ ನಿಷ್ಟ್ರೀಯ ದಳ ಕಚೇರಿಗೆ ಆಗಮಿಸಿದ್ದು, ಬಾಂಬ್ ಗಾಗಿ ಶೋಧ ಆರಂಭಿಸಿದ್ದಾರೆ. ಬೆದರಿಕೆ ಕರೆ ಮಾಡಿದ್ದು ಮಹಿಳೆ ಎಂದು ಕವಿತಾ ಅವರು ಹೇಳಿದ್ದಾರೆ. ಕರೆ ಬಂದ ಸಮಯದಲ್ಲಿ ಮನೆಯಲ್ಲಿ ಕೋಟಿ ಪ್ರಸಾದ್ ಅವರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನ ಇನ್ಫೋಸಿಸ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬರುತ್ತಿರುವುದು ಇದು ಎರಡನೇ ಬಾರಿ ಹಿಂದೆ 2008ರ ನವೆಂಬರ್ 19ರಂದು ಹುಸಿ ಬೆದರಿಕೆ ಕರೆ ಬಂದಿತ್ತು.













Click it and Unblock the Notifications