ದೆಹಲಿಯಲ್ಲಿ ಬಿಜೆಪಿ ಸರ್ಕಾರ ಖಚಿತ ಅಂದ್ರು ಡಿವಿಎಸ್
ಮಂಗಳೂರು, ಫೆ.9 : 'ದೆಹಲಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಲಿದೆ. ಬಿಜೆಪಿ ನೇತೃತ್ವದ ಸರ್ಕಾರವೇ ದೆಹಲಿಯಲ್ಲಿ ಆಡಳಿತಕ್ಕೆ ಬರಲಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸದಾನಂದ ಗೌಡರು, ಜನರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಆದ್ದರಿಂದ ಅವರು ಬಿಜೆಪಿಗೆ ಮತ ನೀಡಲಿದ್ದು ದೆಹಲಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದರು.

ಯಾವುದೇ ಸಮೀಕ್ಷೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಸದಾನಂದ ಗೌಡರು, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಪ್ರಬಲ ಸ್ಪರ್ಧೆ ಇದೆ. ಆದರೆ, ಅಂತಿಮವಾಗಿ ಗೆಲುವು ಬಿಜೆಪಿ ಪಾಲಾಗಲಿದೆ ಎಂದು ಗೌಡರು ಭವಿಷ್ಯ ನುಡಿದರು.[ದೆಹಲಿ ಚುನಾವಣೆ: ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ]
ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆ ವೇದಿಕೆಯಲ್ಲಿಯೇ ಇರಲಿಲ್ಲ. ಈಗಾಗಲೇ ಪಕ್ಷ ದೇಶದ ಪ್ರತಿ ರಾಜ್ಯದಲ್ಲಿಯೂ ನೆಲೆ ಕಳೆದುಕೊಳ್ಳುತ್ತಿದೆ. ಈಗ ದೆಹಲಿಯಲ್ಲಿಯೂ ನೆಲೆ ಕಳೆದುಕೊಳ್ಳಲಿದೆ. ತಮಗೆ ಓಟು ಸಿಗದಿದ್ದರೂ ಪರವಾಗಿಲ್ಲ ಬಿಜೆಪಿಗೆ ಮತ ಸಿಗಬಾರದು ಎಂದು ಕಾಂಗ್ರೆಸ್ ತಂತ್ರ ರೂಪಿಸಿತ್ತು ಎಂದು ಗೌಡರು ವ್ಯಂಗ್ಯವಾಡಿದರು. [ಚಿತ್ರಗಳಲ್ಲಿ : ದೆಹಲಿ ವಿಧಾನಸಭೆ ಚುನಾವಣೆ ಮತದಾನ]
ಅಭಿಯಾನ ಯಶಸ್ವಿಯಾಗುತ್ತಿದೆ : ಕರ್ನಾಟಕದಲ್ಲಿ ಬಿಜೆಪಿ ಆರಂಭಿಸಿರುವ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದಲ್ಲಿ 1 ಕೋಟಿ ಸದಸ್ಯತ್ವ ನೋಂದಾಯಿಸುವ ಗುರಿಯನ್ನು ಹೊಂದಿದ್ದು, ಜನರು ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.
ಅಂದಹಾಗೆ ಫೆಬ್ರವರಿ 10ರ ಮಂಗಳವಾರ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು ಒನ್ ಇಂಡಿಯಾ ಕನ್ನಡ ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಫಲಿತಾಂಶದ ವರದಿಯನ್ನು ನೀಡಲಿದೆ.












Click it and Unblock the Notifications