ಅ. 4ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರಿಗೆ
ಮಂಗಳೂರು, ಸೆಪ್ಟೆಂಬರ್ 27: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಕ್ಟೋಬರ್ 4ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಕ್ಟೋಬರ್ 3ರಂದು ಕೇರಳ ರಾಜ್ಯ ಬಿಜೆಪಿ ವತಿಯಿಂದ ಕಣ್ಣೂರಿನಿಂದ ತಿರುವನಂತಪುರಂವರೆಗೆ ನಡೆಯುವ "ಜನರಕ್ಷಾ ಯಾತ್ರೆ" ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಅವರು ಮರುದಿನ ಅಂದರೆ ಅಕ್ಟೋಬರ್ 4ರಂದು ಮಂಗಳೂರಿನಲ್ಲಿ ಪಕ್ಷದ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 4 ರಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜತೆ ರಾಜ್ಯ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ. ಬಿ.ಎಸ್ ಯಡಿಯೂರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಸಹಿತ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಮಿತ್ ಶಾ ಆಗಮನ ಸಂದರ್ಭ ಮಂಗಳೂರಿನಲ್ಲಿ ಪಾದಯಾತ್ರೆ ನಡೆಸುವ ಬಗ್ಗೆಯೂ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿತ್ತು. ಈಗ ಪಾದಯಾತ್ರೆ ಬದಲು ಉದ್ದೇಶಿತ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ಬಿಜೆಪಿ ನಿರ್ಧರಿಸಿದೆ.
ಇನ್ನು ಅಕ್ಟೋಬರ್ 4ರಂದು ಸಾಯಂಕಾಲ ನಗರದ ಡಾ. ಟಿ.ಎಂ.ಎ ಪೈ ಸಭಾಂಗಣದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಜತೆ ಅಮಿತ್ ಶಾ ಸಂವಾದ ನಡೆಸಲಿದ್ದಾರೆ.












Click it and Unblock the Notifications