ಸುಪ್ರೀಂಕೋರ್ಟಿಗೇ ಚಳ್ಳೆಹಣ್ಣು ತಿನ್ನಿಸಿದ ಬೆಳ್ತಂಗಡಿ ಬಾರ್ ಮಾಲೀಕ
ಕಾನೂನು ಚಾಪೆಯೊಳಗೆ ನುಗ್ಗಿದರೆ ಕಾನೂನು ಬಂಜಕರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಗಾದೆ ಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಾರ್ ಮಾಲಕನೋರ್ವ ಸಾಬೀತು ಮಾಡಿತೋರಿಸಿದ್ದಾನೆ.
ಮಂಗಳೂರು, ಆ.3 : ಹೆದ್ದಾರಿ ಪಕ್ಕದಲ್ಲಿ ಬಾರ್ ಗಳು ಇರಬಾರದು ಎಂಬುದು ಸುಪ್ರೀಂಕೋರ್ಟ್ ಆದೇಶ. ಮಂಗಳೂರಿನ ಬಾರ್ ಮಾಲೀಕನೊಬ್ಬ ತನ್ನ ಐಡಿಯಾದ ಮೂಲಕ ನ್ಯಾಯಾಲಯದ ಆದೇಶ ಪಾಲಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾನೆ.
ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಡಿ.ಕೆ ಬಾರ್ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದೆ. ಕೋರ್ಟ್ ಆದೇಶದಂತೆ ಬಾರ್ ಮತ್ತು ಮದ್ಯದಂಗಡಿಗಳು ಗ್ರಾಮಾಂತರ ಪ್ರದೇಶದಲ್ಲಿ ಹೆದ್ದಾರಿಯಿಂದ 250 ಮೀಟರ್ ದೂರದಲ್ಲಿರಬೇಕು.
ಆದರೆ, ಡಿ.ಕೆ.ಬಾರ್ 250 ಮೀಟರ್ ಗಿಂತ ಕಡಿಮೆ ಅಂತರದಲ್ಲಿದೆ. ಕೋರ್ಟ್ ಆದೇಶ ಪಾಲಿಸಲು ಮುಂದಾದ ಬಾರ್ ಮಾಲೀಕ ಕೆ.ಕುರಿಯನ್. ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಾರ್ ರಸ್ತೆಯಿಂದ ಕೇವಲ 10 ಮೀಟರ್ ದೂರದಲ್ಲಿದ್ದರೂ 250 ಮೀಟರ್ ದೂರದಲ್ಲಿರುವಂತೆ ಮಾಡಲಾಗಿದೆ.
ರಸ್ತೆ ಬದಿಯಲ್ಲಿ ಇರುವ ತನ್ನ ಬಾರ್ ಗೆ ಗ್ರಾಹಕರು ನೇರವಾಗಿ ಬರುವ ಮುಖ್ಯ ಮಾರ್ಗವನ್ನು ಸುತ್ತಿ ಬಳಸಿ ಬರುವಂತೆ ಮಾರ್ಪಾಡು ಮಾಡಲಾಗಿದೆ. ತಗಡಿನ ಶೀಟ್ ಮೂಲಕ ಬದಲಿ ದಾರಿ ರಚಿಸುವ ಮೂಲಕ ಕೋರ್ಟ್ ಆದೇಶವನ್ನೂ ಪಾಲಿಸಿ, ವ್ಯಾಪಾರಕ್ಕೂ ತೊಂದರೆ ಆಗದಂತೆ ಮಾಡಿಕೊಂಡಿದ್ದಾನೆ. ಬೆಳ್ತಂಗಡಿ ಮತ್ತು ಇತರ ಪೇಟೆಗಳಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿರುವ ಕಾರಣ ಪಾನಪ್ರಿಯರು ಸಂತೆಕಟ್ಟೆಯ ಡಿ.ಕೆ ಬಾರನ್ನೇ ಅವಲಂಬಿಸಿದ್ದಾರೆ.

ಲಂಚ ಪಡೆದಿದ್ದಾರೆ ಎಂಬ ಆರೋಪ
ಡಿ.ಕೆ.ಬಾರ್ ಮಾಲೀಕರ ಈ ಐಡಿಯಾ ಅಬಕಾರಿ ಇಲಾಖೆಯವರ ಕಣ್ಣಿಗೆ ಬಿದ್ದಿಲ್ಲವೇ ಎಂಬುದು ಪ್ರಶ್ನೆ. ಆದರೆ, ಸ್ತಳೀಯರು ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಲೀಕನಿಂದ ಲಂಚ ಪಡೆದಿದ್ದಾರೆ. ಆದ್ದರಿಂದ ಸುಮ್ಮನಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಸುಪ್ರೀಂಕೋರ್ಟ್ ಹೇಳುವುದೇನು?
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಬಾರ್ ಗಳನ್ನು ಮುಚ್ಚಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯಂತೆ ನಗರ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಐನೂರು ಮೀಟರ್, ಗ್ರಾಮೀಣ ಪ್ರದೇಶದಲ್ಲಿ 250 ಮೀಟರ್ ದೂರದೊಳಗೆ ಬಾರ್ ಇದ್ದರೆ ಮುಚ್ಚಬೇಕಿತ್ತು.

ಕೇರಳದಲ್ಲೂ ಕ್ರೇಜಿ ಐಡಿಯಾ
ಬೆಳ್ತಂಗಡಿಯ ಡಿ.ಕೆ.ಬಾರ್ ಮಾತ್ರವಲ್ಲ ಕೇರಳದಲ್ಲಿಯೂ ಒಂದು ಬಾರ್ ಗೆ ಹೋಗಲು ಪ್ರತ್ಯೇಕವಾದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಹೆದ್ದಾರಿ ಪಕ್ಕದಲ್ಲಿ ಬಾರ್ ಇದ್ದರೂ ಅದಕ್ಕೆ ಸುತ್ತಿ ಬಳಸಿ ಬರುವಂತೆ ಮಾರ್ಗ ರಚನೆ ಮಾಡಿ ಸುಪ್ರೀಂ ಆದೇಶ ಪಾಲನೆಗೆ ಹೊಸ ದಾರಿ ಹುಡುಕಲಾಗಿತ್ತು.

ಲೈಸೆನ್ಸ್ ರದ್ದುಗೊಳಿಸಲು ಕೋರ್ಟ್ ಸೂಚನೆ
ಸುಪ್ರೀಂಕೋರ್ಟ್ 2017 ರ ಏಪ್ರಿಲ್ ನಿಂದ ಈ ನಿಯಮವನ್ನು ಜಾರಿಗೆ ತರಬೇಕು ಎಂದು ಸೂಚನೆ ನೀಡಿತ್ತು. ಹೆದ್ದಾರಿ ಪಕ್ಕದಲ್ಲಿರುವ ಬಾರ್ ಗಳ ಲೈಸೆನ್ಸ್ ಅನ್ನು ನವೀಕರಣ ಗೊಳಿಸದೇ ರದ್ದು ಮಾಡಬೇಕು ಎಂದು ಆದೇಶಿಸಿತ್ತು.

ಎಷ್ಟು ಬಾರ್ ಬಂದ್ ಆಗಿವೆ?
ಸುಪ್ರೀಂ ಆದೇಶ ಪಾಲನೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 209ಬಾರ್ ಬಂದ್ ಆಗಿವೆ. 254 ಬಾರ್ ಗಳನ್ನು ನವೀಕರಣ ಮಾಡಲು ಒಪ್ಪಿಗೆ ಸಿಕ್ಕಿದೆ.











Click it and Unblock the Notifications