ಜಮೀರ್ ಅಹ್ಮದ್‌ನ ರಸ್ತೆಯಲ್ಲಿ ಓಡಾಡಲು ಬಿಟ್ಟಿರೋದೇ ಹೆಚ್ಚು- ಬಿ.ವೈ ವಿಜಯೇಂದ್ರ
ಮಂಗಳೂರು, ನವೆಂಬರ್ 22: ಸಚಿವ ಜಮೀರ್ ಅಹ್ಮದ್ ರಸ್ತೆಯಲ್ಲಿ ಓಡಾಡಲು ನಾವು ಬಿಟ್ಟಿರೋದೇ ಹೆಚ್ಚು. ಅವರು ಸ್ಪೀಕರ್ ಸ್ಥಾನಕ್ಕೆ ಜಾತಿ ಧರ್ಮ ಬಣ ಹಚ್ಚಿ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ಹೊತ್ತಿಗೆ ಜಮೀರ್ ಅಹ್ಮದ್ ಅವರಿಂದ ಸಿಎಂ ರಾಜಿನಾಮೆ ತೆಗೆದುಕೊಳ್ಳಬೇಕಿತ್ತು. ಮುಂದಿನ ಅಧಿವೇಶನದಲ್ಲಿ ಹೇಗೆ ಭಾಗವಹಿಸುತ್ತಾರೆ ನೋಡುತ್ತೇವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಭರವಸೆ ನೀಡಿ ಕಣ್ಣಿಗೆ ಮಣ್ಣೆರಚಿ ಬಹುಮತ ಪಡೆದಿದೆ. ಇದೀಗ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಅದನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿಲ್ಲ, ಅಧಿಕಾರಿಗಳ ಸಭೆ ಕೂಡ ಕರೆದಿಲ್ಲ.
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬರದ ವಿಚಾರ ಮಾತನಾಡದೆ ಲೋಕಸಭಾ ಚುನಾವಣಾ ಗೆಲ್ಲುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರ ರೈತರು, ಬಡವರು, ದಲಿತರ ವಿರೋಧಿ ಸರ್ಕಾರ. ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ರೈತರು ಪರದಾಡುತ್ತಿರುವ ಈ ಸಂದರ್ಭದಲ್ಲಿ ಬೋರ್ಡ್ ಚುನಾವಣೆ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡುತ್ತಿತ್ತು. ಈಗ ವಿದ್ಯುತ್ ಅಭಾವ ಸೃಷ್ಟಿಯಾಗಿ ಎರಡು ತಾಸು ಕೂಡಾ ವಿದ್ಯುತ್ ಸಿಗುತ್ತಿಲ್ಲ. ಸರ್ಕಾರ ಬಂದು ಆರು ತಿಂಗಳು ಆದರೂ ಅಧಿಕಾರ ಹಿಡಿದವರು ಮೋಜಿನಲ್ಲಿ ಮುಳುಗಿದ್ದಾರೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ರಾಜ್ಯ ಸರ್ಕಾರ ಜವಾಬ್ದಾರಿ ಮರೆತಿದೆ. ಮುಂದೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ಬಹಳಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಮುಂದೆ ಅದು ಆಗದಂತೆ ಎಚ್ಚರ ವಹಿಸುತ್ತೇವೆ. ಅದಕ್ಕಾಗಿ ನಾವೆಲ್ಲರೂ ಒಗಟ್ಟಾಗಿ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಿ 28 ಲೋಕಸಭಾ ಕ್ಷೇತ್ರವನ್ನು ಚುನಾವಣೆ ಗೆದ್ದು ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡುತ್ತೇವೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ಮಾತು ಮುಂದುವರಿಸಿದ ಅವರು, ರಾಜ್ಯಾಧ್ಯಕ್ಷನಾಗಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದೇನೆ. ಕಳೆದ ಹಲವು ತಿಂಗಳುಗಳಿಂದ ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಎಂಬ ಚರ್ಚೆ ಆಗುತಿತ್ತು. ವಿಪಕ್ಷ ನಾಯಕ ಆಯ್ಕೆಯ ಬಗ್ಗೆಯೂ ನಾನಾ ಚರ್ಚೆಗಳು ನಡೆಯುತಿತ್ತು. ಕಾಂಗ್ರೆಸ್ ಕೂಡಾ ನಮ್ಮನ್ನು ಈ ವಿಚಾರವಾಗಿ ಟೀಕೆ ಮಾಡಿತ್ತು. ಬಿಜೆಪಿಯ ಹಿರಿಯರು ನನಗೆ ಜವಾಬ್ದಾರಿಯನ್ನು ನೀಡಿದ್ದಾರೆ. ಹಿಂದಿನ ಯಶಸ್ವಿ ಅಧ್ಯಕ್ಷ ಕಟೀಲ್ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಕೇವಲ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ರೈತ ವಿರೋಧಿ, ದಲಿತ ವಿರೋಧಿ ಸರ್ಕಾರ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ. ಬರದ ಪರಿಹಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಉಸ್ತುವಾರಿ ಸಚಿವರುಗಳು ಯಾವುದೇ ಸಭೆ, ಸ್ಪಂದನೆ ಮಾಡುತ್ತಿಲ್ಲ. ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ಆದರೂ ಸರ್ಕಾರ ರೈತರ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇತ್ತು. ಆದರೆ ನಿನ್ನೆಯ ಸಭೆಯಲ್ಲಿ ಲೋಕಾಸಭಾ ಚುನಾವಣೆಯನ್ನು ಗೆಲ್ಲುವ ಬಗ್ಗೆ ಮಾತಾಡಿದ್ದಾರೆ. ರಾಜ್ಯದ ಬರ ಸಂಧರ್ಭದಲ್ಲಿ ಮುಖ್ಯಮಂತ್ರಿ, ಸಚಿವರ ಆದ್ಯತೆ ಏನು ಎಂಬುವುದು ಪ್ರಶ್ನೆ ಮಾಡಬೇಕಿದೆ ಎಂದು ಹೇಳಿದರು.












Click it and Unblock the Notifications