ಸರ್ಕಾರಿ ಶಾಲೆಗಳಲ್ಲಿ ಬದಲಾದ ಭಾಷಾ ನೀತಿ, ಮಂಗಳೂರಿನ ಪೋಷಕರಲ್ಲಿ ಗೊಂದಲ
ಮಂಗಳೂರು , ಮೇ 31: ಇಂಗ್ಲಿಷ್ ವ್ಯಾಮೋಹದಿಂದ ಮಕ್ಕಳು ಖಾಸಗಿ ಶಾಲೆಗಳಿಗೆ ವರ್ಗಾವಣೆ ಪಡೆಯುವುದನ್ನು ತಪ್ಪಿಸಲು ಸರಕಾರಿ ಶಾಲೆಗಳಲ್ಲಿಯೂ 6ರಿಂದ 10ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ವಿಭಾಗ ಪ್ರಾರಂಭಕ್ಕೆ ಅನುಮತಿ ನೀಡಲು ಸರಕಾರ ನಿರ್ಧರಿಸಿದೆ. ಆದರೆ ಎಲ್.ಕೆ.ಜಿಯಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಜಿಲ್ಲೆಯ 19 ಸರ್ಕಾರಿ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಮುಚ್ಚಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಡಿ ಮೆಲ್ಲೋ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಶಾಲೆಗಳ ಹೆತ್ತವರು ಗೊಂದಲ ಮತ್ತು ಆತಂಕದಲ್ಲಿ ಸಿಲುಕಿದ್ದಾರೆ.
ಆ ಶಾಲೆಗಳ ಪೈಕಿ ನಗರದ ಕಸ್ಬಾ ಬೆಂಗ್ರೆ ಕೂಡ ಒಂದಾಗಿದ್ದು, ತಮ್ಮ ಮಕ್ಕಳೊಂದಿಗೆ ಶಾಲೆಗೆ ಆಗಮಿಸಿದ ಹೆತ್ತವರು ಮಕ್ಕಳ ಶಿಕ್ಷಣ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

"ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಸರ್ಕಾರ ನಿರಾಕರಿಸುತ್ತಿರುವುದು ನಿಜಕ್ಕೂ ದುಃಖದ ವಿಷಯ" ಎಂದು ಕಸ್ಬಾ ಬೆಂಗ್ರೆ ಶಾಲಾ ವಿದ್ಯಾರ್ಥಿಗಳ ಹೆತ್ತವರಲ್ಲಿ ಒಬ್ಬರಾದ ರೀಮಾ ಹೇಳಿದ್ದಾರೆ. ಕೆಲವು ಹೆತ್ತವರು ಈಗಾಗಲೇ ರೂ 2,700 ಶುಲ್ಕವನ್ನು ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗೆ ಪಾವತಿಸಿ, ಎರಡು ಜೊತೆ ಸಮವಸ್ತ್ರ, ಪುಸ್ತಕ ಮತ್ತು ಬ್ಯಾಗ್ ಖರೀದಿಸಿದ್ದರೂ ಶಿಕ್ಷಣ ಇಲಾಖೆಯ ಆದೇಶದಿಂದ ಬೇಸರಗೊಂಡು ತಮ್ಮ ಮಕ್ಕಳನ್ನು ಪಕ್ಕದ ಖಾಸಗಿ ಶಾಲೆಗೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಶಾಲೆಯಲ್ಲಿ ಕಲಿಯುತ್ತಿದ್ದ 300 ವಿದ್ಯಾರ್ಥಿಗಳ ಹೆತ್ತವರು ಮಾತ್ರವಲ್ಲ ಇದೀಗ ಹೊಸದಾಗಿ ಈ ವರ್ಷ ಎಲ್.ಕೆ.ಜಿ ಮತ್ತು ಯು.ಕೆ.ಜಿಗೆ ಮಕ್ಕಳನ್ನು ಸೇರ್ಪಡೆಗೊಳಿಸಿದ 200 ಮಂದಿ ಹೆತ್ತವರು ಕೂಡ ಚಿಂತೆಗೀಡಾಗಿದ್ದಾರೆ.

ಶಾಲಾ ಆರಂಭದ ಮೊದಲ ದಿನ ಸೋಮವಾರ ನೊಂದ ಹೆತ್ತವರನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಮಧಾನಗೊಳಿಸುತ್ತಾ "5ನೇ ತರಗತಿವರೆಗೆ ಮಕ್ಕಳಿಗೆ ಇಂಗ್ಲಿಷ್ ಸಂಭಾಷಣೆಗೆ ಬೇಕಾದ ತರಬೇತಿ ನೀಡಲಾಗುವುದು" ಎಂಬ ಭರವಸೆ ನೀಡಿದ್ದಾರೆ.
ಪ್ರತಿಭಟನೆ
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆಯ ತೀರ್ಮಾನಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಬೇಂಗ್ರೆ ಕಸಬಾದ ಸರಕಾರಿ ಹಿ.ಪ್ರಾ. ಶಾಲೆಯ ಆಂಗ್ಲಮಾಧ್ಯಮದ 300 ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಮುಖ್ಯ ಶಿಕ್ಷಕರ ಕಚೇರಿ ಮುಂದೆ ಧರಣಿ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಇಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳ ಹೆತ್ತವರು 'ಸ್ವತ: ನಾವೇ ಹಣ ಸಂಗ್ರಹಿಸಿ ನಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮ ತರಗತಿಗಳನ್ನು ನಡೆಸುತ್ತಿದ್ದರೂ ಅದಕ್ಕೆ ತಾವು ಅವಕಾಶ ನೀಡದಿರುವುದು ಖಂಡನೀಯ. ಖಾಸಗಿ ಸಂಸ್ಥೆಗಳು ಕನ್ನಡ ಮಾಧ್ಯಮ ತರಗತಿಗಾಗಿ ಅನುಮತಿ ಪಡೆದು ಬಳಿಕ ಆಂಗ್ಲಮಾಧ್ಯಮ ತರಗತಿಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಜರಗಿಸದ ತಾವು ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿರುವ ಕಸಬಾ ಬೆಂಗ್ರೆಯ ಶಾಲೆಯ ಮೇಲೆ ಕಣ್ಣು ಹಾಯಿಸಿರುವುದು ಸರಿಯಲ್ಲ' ಎಂದು ಹರಿಹಾಯ್ದರು.
ಧರಣಿಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡ ಬಿ.ಕೆ.ಇಮ್ತಿಯಾಝ್, ಬೆಂಗರೆ ಘಟಕದ ಮುಖಂಡರಾದ ಎ.ಬಿ.ನೌಶಾದ್ ಮತ್ತಿತರರಿದ್ದರು.












Click it and Unblock the Notifications