ಧರ್ಮಸ್ಥಳ: ಹೊಸ ಲುಕ್‌ನಲ್ಲಿ ಮಂಜುಷಾ ಸೇರಿದ 75 ವರ್ಷದ ಹಳೆ ಲಾರಿ, ಇಲ್ಲಿದೆ ಸಂಪೂರ್ಣ ವಿವರ
ಮಂಗಳೂರು, ನವೆಂಬರ್ 03: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಾಹನ ಪ್ರೇಮ ಎಲ್ಲರಿಗೂ ಗೊತ್ತಿದೆ. ಹೆಗ್ಗಡೆ ಅವರ ವಾಹನ ಪ್ರೀತಿಗೆ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿರುವ ವಾಹನಗಳಿರೋದೇ ಇದಕ್ಕೆ ಸಾಕ್ಷಿ.
ಮಂಜುಷಾ ವಾಹನ ಸಂಗ್ರಹಾಲಯಕ್ಕೆ ಈಗ ಮತ್ತೊಂದು ವಾಹನ ಸೇರ್ಪಡೆಯಾಗಿದೆ. ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಷ್ಟೇ ಪ್ರಾಯ ಆದ ವಾಹನಕ್ಕೆ ಈಗ ಮತ್ತೆ ಜೀವಕಳೆಯನ್ನು ನೀಡಲಾಗಿದ್ದು, ಹೊಸ ಸ್ಪರ್ಶ ದೊಂದಿಗೆ ವಾಹನ ಸಂಗ್ರಹಾಲಯವನ್ನು ಸೇರಿದೆ.

1948ರ ಫೋರ್ಡ್ ಕಂಪೆನಿಯ ಲಾರಿಗೆ ಈಗ ಹೊಸ ಸ್ಪರ್ಶ ನೀಡಲಾಗಿದೆ. ಈ ಲಾರಿಯನ್ನು ವೀರೇಂದ್ರ ಹೆಗ್ಗಡೆಯವರ ತಂದೆ ರತ್ನವರ್ಮ ಹೆಗ್ಗಡೆ 1965 ಕ್ಷೇತ್ರಕ್ಕೆ ತಂದಿದ್ದು, ಆಗಲೇ ಲಾರಿ ಹಳೆಯ ಗಾಡಿಯಾಗಿತ್ತು. Myx 5206 ನಂಬರ್‌ನ ಫೋರ್ಡ್ ಲಾರಿ ಆಗ ಕ್ಷೇತ್ರದ ಕೆಲಸಗಳಿಗೆ ಬಳಕೆಯಾಗುತಿತ್ತು.
ಕಾಲ ಕ್ರಮೇಣ ಹೊಸ ಲಾರಿಗಳು ಬಂದಾಗ ಈ ಫೋರ್ಡ್ ಲಾರಿ ಮೂಲೆ ಸೇರಿದ್ದು, ಬಳಿಕ ನಿರ್ವಹಣೆ ಇಲ್ಲದೇ ಹಾಳಾಗಿತ್ತು. ಈ ಲಾರಿಯನ್ನು ಎಳವೆಯಲ್ಲಿ ಧರ್ಮಾಧಿಕಾರಿ ಹೆಗ್ಗಡೆ ಓಡಿಸಿದ್ದರಿಂದ ಈ ಲಾರಿಯ ಮೇಲೆ ಪ್ರೀತಿಯಿಂದ ಲಾರಿ ಮಾರಾಟ ಮಾಡಿರಲಿಲ್ಲ. ಈಗ ಈ ಹಳೆ ಲಾರಿಗೆ ನವೀನ ಸ್ಪರ್ಶ ನೀಡಲಾಗಿದ್ದು, ಕುಂದಾಪುರದ ತೆಕ್ಕಟ್ಟೆಯ ಶ್ರೀ ಗಜಾನನ ಟ್ರಕ್ ಬಾಡಿ ಬಿಲ್ಡರ್ಸ್ ಸಂಸ್ಥೆ ಲಾರಿಯನ್ನು ಹೊಸದಾಗಿ ಮಾರ್ಪಾಟು ಮಾಡಿದ್ದಾರೆ.
ಲಾರಿ ಹೊಸ ಗಾಡಿಯ ತರಹವೇ ತಯಾರಾಗಿದ್ದು, ಹಳೆಯ ಐದು ಟನ್ ಲಾರಿಯ ಸೌಂದರ್ಯವನ್ನು ಈಗ ಕಾಣಬಹುದಾಗಿದೆ. ಈ ಲಾರಿಯಲ್ಲಿ ಟಿಂಕರಿಂಗ್ ಕೆಲಸ ಮಾಡಲಾಗಿದೆ. ಅಂಬಾಸಿಡರ್ ಕಾರ್ ಹೆಡ್ ಲೈಟ್‌ಅನ್ನು ಈ ಲಾರಿಗೆ ಅಳವಡಿಸಲಾಗಿದೆ. ಅರ್ಧ ಇಂಜಿನ್ ಕೆಲಸವನ್ನು ಹೊಸದಾಗಿಯೇ ಮಾಡಲಾಗಿದ್ದು, ಒಂಭತ್ತು ತಿಂಗಳು ಲಾರಿ ನಿರ್ಮಾಣಕ್ಕಾಗಿ ಸಮಯ ನೀಡಲಾಗಿದೆ.

ಇಂಟೀರಿಯರ್ ವರ್ಕ್‌ಅನ್ನು ಸಾಗುವನಿ ಮರವನ್ನು ಬಳಸಿ ಮಾಡಲಾಗಿದೆ. ಲಾರಿಯನ್ನು ಫುಲ್ ರೀ ಫೈಂಟ್ ಕ್ಲಿಯರ್ ಕೋಟ್‌ನಲ್ಲಿ ಮಾಡಲಾಗಿದೆ. ಎಲ್ಲಾ ಭಾಗಗಳನ್ನು ಬಿಚ್ಚಿ ಕೆಲಸ ಮಾಡಿದ್ದು, ಲಾರಿ ಬಿಡಿ ಭಾಗವನ್ನು ಬೆಂಗಳೂರಿನಿಂದ ಆರ್ಡರ್ ಮಾಡಿ ಹಾಕಲಾಗಿದೆ. ಎರಡು ತಿಂಗಳು ಈ ಲಾರಿಯ ಬಿಡಿಭಾಗಗಳನ್ನು ತರಲೆಂದೇ ತಂಡ ಕೆಲಸ ಮಾಡಿದೆ.
ಲಾರಿಯ ಕೆಲಸ ಪೂರ್ತಿಯಾದ ಬಳಿಕ ಡ್ರೈವ್ ಮಾಡಿಯೇ ಲಾರಿಯನ್ನು ಕ್ಷೇತ್ರಕ್ಕೆ ತರಲಾಗಿದೆ. ತೆಕ್ಕಟ್ಟೆಯಿಂದ ಧರ್ಮಸ್ಥಳಕ್ಕೆ 120ಕೀಲೋ ಮೀಟರ್ ದೂರವನ್ನು ಲಾರಿ ಚಲಾಯಿಸಿಕೊಂಡೇ ತರಲಾಗಿದೆ. ಈ ಲಾರಿ ಸದ್ಯ 7 ಕೀಮೀ ಮೈಲೇಜ್ ನ್ನು ನೀಡುತ್ತಿದೆ. ಹಳೆಯ ಲಾರಿ ಮೂಲ ಡಿಸೈನ್‌ಗೆ ಎಳ್ಳಷ್ಟೂ ಧಕ್ಕೆ ಬರದಂತೆ ನಿರ್ಮಿಸಲಾಗಿದ್ದು, ತಾನು ಚಲಾಯಿಸಿದ ಲಾರಿ ಮತ್ತೆ ಹೊಸದಾಗಿ ಕಣ್ಣೆದೆರು ಬಂದಿರೋದಕ್ಕೆ ವೀರೇಂದ್ರ ಹೆಗ್ಗಡೆಯವರು ಫುಲ್ ಖುಷ್ ಆಗಿದ್ದಾರೆ.












Click it and Unblock the Notifications