ಮಂಗಳೂರಲ್ಲಿ ಹಿಂದೂ ಮುಖಂಡನ ಮೇಲೆ ದಾಳಿ ಪ್ರಕರಣ: ಮತ್ತೆ ಮೂವರ ಬಂಧನ
ಮಂಗಳೂರು, ಅಕ್ಟೋಬರ್. 08: ವಿಎಚ್ ಪಿ ಮುಖಂಡ ಹರೀಶ ಶೆಟ್ಟಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರಲ್ಪಾಡಿ ನಿವಾಸಿ ಮಹಮ್ಮದ್ ಶಮೀರ್ ( 27), ಕಜೆ ಪದವು ನಿವಾಸಿ ಇಷಾನ್ (21 ) ಮತ್ತು ಉಳಾಯಿ ಬೆಟ್ಟು ನಿವಾಸಿ ಮಹಮ್ಮದ್ ಖಾಲಿದ್ (30) ಎಂದು ಗುರುತಿಸಲಾಗಿದೆ.
ಕಳೆದ ಸೆಪ್ಟೆಂಬರ್.24 ರಂದು ಕೈಕಂಬ ಬಳಿಯ ಸುರಲ್ಪಾಡಿ ಎಂಬಲ್ಲಿ ವಿಎಚ್ ಪಿ ಮುಖಂಡ ಹರೀಶ್ ಶೆಟ್ಟಿ ಎಂಬುವವರ ಕೊಲೆ ಯತ್ನ ಘಟನೆ ನಡೆದಿತ್ತು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃತ್ಯಕ್ಕೆ ಬಳಿಸಿದ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಪಣಂಬೂರು ಠಾಣೆಯ ರೌಡಿ ನಿಗ್ರಹ ದಳದ ಪೊಲೀಸರು ಈ ಹಿಂದೆ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳದ ಕಲಾಯಿ ನಿವಾಸಿ ಮಹಮ್ಮದ್ ಶರೀಫ್ ಯಾನೆ ಕಲಾಯಿ ಶರೀಫ್(24), ಬಜಪೆ ನಿವಾಸಿಗಳಾದ ಮಹಮ್ಮದ್ ಶಿಫಾಜ್( 21) ಹಾಗೂ ಮಹಮ್ಮದ್ ಆರೀಫ್ ಎಂದು ಗುರುತಿಸಲಾಗಿತ್ತು.
ವಿಶ್ವಹಿಂದೂ ಪರಿಷತ್ ಮುಖಂಡ, ಪೊಳಲಿ ನಿವಾಸಿ ಹರೀಶ್ ಶೆಟ್ಟಿ ಅವರ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಪರಾರಿಯಾಗಿತ್ತು. ಘಟನೆಯಲ್ಲಿ ಹರೀಶ್ ಶೆಟ್ಟಿ ಗಂಭೀರವಾಗಿ ಗಾಯ ಗೊಂಡಿದ್ದ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹರೀಶ್ ಶೆಟ್ಟಿ ಕೈಕಂಬದಲ್ಲಿ ಖಾಸಗಿ ಬಸ್ ಟೈಂ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ 2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು.
ಸೆಪ್ಟೆಂಬರ್ 24 ರಂದು ಮುಂಜಾನೆ ಮೂಡಬಿದರೆಯ ಗಂಟಲ್ ಕಟ್ಟೆ ಎಂಬಲ್ಲಿ ಪ್ರಶಾಂತ ಪೂಜಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಮ್ತಿಯಾಜ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದರು. ಇಮ್ತಿಯಾಜ್ ಮೇಲಿನ ಹಲ್ಲೆಗೆ ಪ್ರತೀಕಾರವಾಗಿಯೇ ಹರೀಶ್ ಶೆಟ್ಟಿ ಅವರ ಮೇಲೆ ತಲವಾರು ದಾಳಿ ನಡೆಸಲಾಗಿದೆ ಎಂದು ಹೇಳಲಾಗಿತ್ತು.












Click it and Unblock the Notifications