ಸಾಲ ಮನ್ನಾ ಘೋಷಣೆ ನಿರೀಕ್ಷೆ ಹುಸಿ, ಮಂಡ್ಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು: ರಾಜ್ಯ ಬಜೆಟ್ ನಲ್ಲಿ ಸಾಲಮನ್ನಾ ಮಾಡಬಹುದೆಂದು ನಂಬಿದ್ದ ರೈತರು ಇದೀಗ ಪೆಚ್ಚಾಗಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಇಬ್ಬರು ರೈತರು ನೊಂದು, ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಒಬ್ಬರು ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ.

ಇದುವರೆಗೆ ಬಜೆಟ್ ಮಂಡನೆಯಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಆದರೆ ಈ ಬಾರಿ ಇಂತಹದೊಂದು ಪರಿಸ್ಥಿತಿ ಎದುರಾಗಿರುವುದನ್ನು ನೋಡಿದರೆ ರೈತರ ಬದುಕು ಎಲ್ಲಿಗೆ ಬಂದು ನಿಂತಿದೆ ಎಂಬುದು ಅರಿವಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಂತೆಯೇ ಮಂಡ್ಯದಲ್ಲಿ ರೈತರಾದ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿಯ ನಾಟನಹಳ್ಳಿ ಗ್ರಾಮದ ಚೆಲುವೇಗೌಡ (68) ಮತ್ತು ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಪ್ರಕಾಶ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಕರ್ನಾಟಕ ಬಜೆಟ್ 2017ರ 24 ಪ್ರಮುಖ ಅಂಶಗಳು..]

Two farmers commits suicide in Mandya after Karnataka budget disappointment

ಇವರಿಬ್ಬರು ಬ್ಯಾಂಕ್ ಸೇರಿದಂತೆ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತ ಚೆಲುವೇಗೌಡ ಸುಮಾರು ಮೂರೂವರೆ ಎಕರೆ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಕೆ.ಆರ್.ಪೇಟೆ ಪಟ್ಟಣದ ಪಿಎಲ್ ಡಿ ಬ್ಯಾಂಕ್ ನಲ್ಲಿ 1 ಲಕ್ಷ ರುಪಾಯಿ ಮತ್ತು ಇತರ ಮೂಲಗಳಿಂದ ಲಕ್ಷಾಂತರ ರುಪಾಯಿ ಕೈ ಸಾಲ ಮಾಡಿದ್ದರು ಎನ್ನಲಾಗಿದೆ.

ಸರಕಾರದಿಂದ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದ್ದರಿಂದ ಜಮೀನು ಬಳಿ ಬೆಳೆ ರಕ್ಷಣೆಗೆಂದು ಹಾಕಿದ್ದ ಬೇಲಿಗೆ ಬೆಂಕಿ ಹಚ್ಚಿ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಪ್ರಕಾಶ್ ಕೃಷಿ ಮಾಡುವ ಸಲುವಾಗಿ ತಾಯಿಯ ಹೆಸರಿನಲ್ಲಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿಗಾಗಿ ಬೋರ್ ವೆಲ್ ಕೊರೆಸಿದ್ದರಾದರೂ ನೀರು ಸಿಗಲಿಲ್ಲ. ಇದಕ್ಕಾಗಿ ಮಾಡಿದ ಲಕ್ಷಾಂತರ ರುಪಾಯಿ ಸಾಲ ಹಾಗೆಯೇ ಉಳಿದುಕೊಂಡಿತ್ತು.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದವರಿಗೆ ಭರ್ಜರಿ ಕೊಡುಗೆ]

ಜತೆಗೆ ಜೀವನೋಪಾಯಕ್ಕಾಗಿ ಸಾಲ ಮಾಡುವುದು ಅನಿವಾರ್ಯವಾಗಿತ್ತು. ಮಾಡಿದ ಸಾಲವನ್ನು ತೀರಿಸಲು ಕೃಷಿ ಮಾಡೋಣವೆಂದರೆ ನೀರಿನ ಸಮಸ್ಯೆಯಿಂದ ತೊಂದರೆಯಾಗಿತ್ತು. ಆದರೆ ಅಷ್ಟರಲ್ಲಾಗಲೇ ಸಾಲ 5 ಲಕ್ಷ ರುಪಾಯಿ ದಾಟಿತ್ತು. ಬಜೆಟ್ ನಲ್ಲಿ ಸಾಲ ಮನ್ನಾ ಮಾಡುತ್ತಾರೆ ಎಂದು ನಂಬಿದ್ದರು. ಅದು ಹುಸಿಯಾದಾಗ ತನ್ನ ಜಮೀನು ಬಳಿಯಿದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ಮತ್ತು ಸಿಎಂ ತವರು ಮೈಸೂರಿನಲ್ಲಿಯೇ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಿರುವಾಗ ಸಂಕಷ್ಟದಲ್ಲಿರುವ ರೈತ ಮುಂದಿನ ದಿನಗಳಲ್ಲಿಯೂ ಮಳೆಯಾಗದೆ ಕೃಷಿ ಕೈಕೊಟ್ಟರೆ ಬದುಕುವುದಾದರೂ ಹೇಗೆ ಎಂಬ ಚಿಂತೆ ಕಾಡತೊಡಗಿದೆ. ಇನ್ನು ಮುಂದೆಯಾದರೂ ಸರಕಾರ ರೈತರ ಪರ ನಿಲ್ಲಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Debt waiver scheme not announced in Karnataka budget 2017, so, disappointed farmers Prakash and Cheluvegowda commits suicide in Mandya.
Please Wait while comments are loading...