ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ?
Recommended Video

ಮಂಡ್ಯ, ಜನವರಿ 29 : ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಿದೆ. ಈಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯದಿಂದ ಸುಮಲತಾ ಅಂಬರೀಶ್, ಅಭಿಷೇಕ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಬಹಳ ದಿನಗಳಿಂದ ಹಬ್ಬಿವೆ. ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ವಿಶ್ಲೇಷಣೆಗಳು ನಡೆದಿದ್ದವು.
ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಸುಮಲತಾ ಅಂಬರೀಶ್ ಅವರಿಗೆ ಬಿಟ್ಟುಕೊಡಲು ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.
ಯಾವುದೇ ಪಕ್ಷದ ಟಿಕೆಟ್ ಬಯಸದೇ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಮಂಗಳವಾರದ ಸುದ್ದಿ. ಚಿತ್ರರಂಗದ ಆಪ್ತರ ಜೊತೆ ಸುಮಲತಾ ಅವರು ಈ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ....

ಕಾಂಗ್ರೆಸ್‌ನಿಂದ ಕಣಕ್ಕಿಳಿಯಲ್ಲ
ಕಾಂಗ್ರೆಸ್ ಪಕ್ಷದಿಂದ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿಯುತ್ತಿಲ್ಲ. 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್‌ನಿಂದ ಅಂಬರೀಶ್ ದೂರವಾಗಿದ್ದರು. ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ನಿರಾಕರಿಸಿದ್ದರು. ಅಂತಿಮವಾಗಿ ಕಾಂಗ್ರೆಸ್‌ನಿಂದ ಗಾಣಿಗ ರವಿ ಕಣಕ್ಕಿಳಿದು ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಜೆಡಿಎಸ್ ಟಿಕೆಟ್ ಸಿಗುವುದು ಅನುಮಾನ
ಕಾಂಗ್ರೆಸ್‌ನಿಂದ ದೂರವಾದ ಅಂಬರೀಶ್ ಅವರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಪಕ್ಷಕ್ಕೆ ಸೇರಿರಲಿಲ್ಲ. ಆದರೆ, ಜೆಡಿಎಸ್ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವುದು ಅನುಮಾನವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

ಸಿನಿಮಾ ರಂಗದವರ ಜೊತೆ ಚರ್ಚೆ
ಸುಮಲತಾ ಅಂಬರೀಶ್ ಅವರು ಸಿನಿಮಾ ರಂಗದ ಹಿತೈಷಿಗಳ ಜೊತೆ ಮಂಡ್ಯದಿಂದ ಚುನಾವಣಾ ಕಣಕ್ಕಿಳಿಯುವ ಕುರಿತು ಚರ್ಚೆ ನಡೆಸಿದ್ದಾರೆ. ಎಲ್ಲರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಅಭೀಷೇಕ್ ಸ್ಪರ್ಧೆ ಬಗ್ಗೆಯೂ ಚರ್ಚೆ
ಸುಮಲತಾ ಅಂಬರೀಶ್ ಹೊರತುಪಡಿಸಿ ಅಭಿಷೇಕ್ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಚರ್ಚೆ ನಡೆದಿದೆ. ಆದರೆ, ಈಗ ಚಿತ್ರರಂಗದಲ್ಲಿ ನೆಲೆಯೂರಲು ಅಭಿಷೇಕ್ ಬಯಸಿದ್ದು, ಅವರ ಮೊದಲ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಆದ್ದರಿಂದ, ಅವರು ಚುನಾವಣಾ ರಾಜಕೀಯದತ್ತ ಆಸಕ್ತಿ ತೋರಿಸಿಲ್ಲ ಎಂದು ತಿಳಿದುಬಂದಿದೆ.

ಜೆಡಿಎಸ್ ಬೆಂಬಲ ನೀಡುತ್ತದೆಯೇ?
ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜೆಡಿಎಸ್ ಬೆಂಬಲ ನೀಡಲಿದೆಯೇ? ಎಂದು ಕಾದು ನೋಡಬೇಕು. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬೆಂಬಲ ನೀಡಲು ಕಾರ್ಯಕರ್ತರು ಒಪ್ಪಿಗೆ ನೀಡಲಿದ್ದಾರೆಯೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.












Click it and Unblock the Notifications