ಎತ್ತಿನ ಗಾಡಿ ಸ್ಪರ್ಧೆ ನೋಡಲು ಬಂದ ವ್ಯಕ್ತಿ ಮೇಲೆ ಹರಿದ ಚಕ್ರ: ಓರ್ವ ಸಾವು, ಮತ್ತೋರ್ವ ಗಂಭೀರ
ಮಂಡ್ಯ, ಜನವರಿ 9 : ಎತ್ತಿನ ಗಾಡಿ ಸ್ಪರ್ಧೆ ನೋಡುತ್ತಿದ್ದ ಪ್ರೇಕ್ಷಕನ ಮೇಲೆ ಗಾಡಿ ಚಕ್ರ ಹರಿದು ಓರ್ವ ಮೃತಪಟ್ಟು, ಮತ್ತೋರ್ವ ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಂಡ್ಯ ಗ್ರಾಮದ ಬಳಿ ನಡೆದಿದೆ.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ನಾಗರಾಜು (55) ಎನ್ನುವಾತ ಎತ್ತಿನ ಗಾಡಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹುಲಿವಾನ ಗ್ರಾಮದ ಋತ್ವಿಕ್ (10) ಮೇಲೆ ಎತ್ತಿನ ಬಂಡಿ ಹರಿದಿದ್ದು, ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾನೆ.
ಘಟನೆಯ ವಿವರ..!
ಹಳ್ಳಿಕೇಶ್ವರ ಬೋರೇಶ್ವರ ಹಾಗೂ ರೈತ ಮಿತ್ರ ಬಳಗದ ವತಿಯಿಂದ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಬಳಿ 8ನೇ ವರ್ಷದ ಅಂತರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಕೀಲಾರ ಗ್ರಾಮದ ಮಧು, ಚಿಕ್ಕಮಂಡ್ಯ ಗ್ರಾಮದ ನರಸಿಂಹ, ಆನಂದ, ರಾಜಪ್ಪ ಎನ್ನುವವರು ಏರ್ಪಡಿಸಿದ್ದರು.

ಜೋಡೆತ್ತು ಸ್ಫರ್ಧೆ ನೋಡಲು ನೆರೆದಿದ್ದ ನೂರಾರು ಮಂದಿ
ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಬಂದಿದ್ದ ಸುಮಾರು 84 ಜೊತೆ ಎತ್ತುಗಳು ಭಾಗವಹಿಸಿದ್ದವು. ಶನಿವಾರದಿಂದಲೇ ಎತ್ತಿನ ಗಾಡಿ ಓಟದ ಸ್ಪರ್ಧೆ ಪ್ರಾರಂಭವಾಗಿದ್ದು, ಭಾನುವಾರ ಅಂತಿಮ ಪಂದ್ಯಗಳು ನಡೆಯುತ್ತಿತ್ತು. ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಈ ದೃಶ್ಯವನ್ನು ನೋಡಿಲು ಆಗಮಿಸಿದ್ದರು. ಒಂದು ಕಡೆಯಿಂದ ಪ್ರಾರಂಭವಾದ ಓಟದ ಸ್ಪರ್ಧೆ ಮತ್ತೊಂದು ತುದಿ ತಲುಪಿತ್ತು. ಮತ್ತೊಂದು ತುದಿಯಲ್ಲಿ ಸಾರ್ವಜನಿಕರು ನಿಂತು ನೋಡುತ್ತಿದ್ದ ವೇಳೆ ಅತಿ ವೇವಾಗಿ ಬಂದ ಎತ್ತಿನ ಗಾಡಿ ಜನರ ಮೇಲೆಯೇ ಹರದಿದೆ.

ಕಾಲ್ತುಳಿತದಿಂದ ಗಂಭೀರ ಗಾಯಗೊಂಡ ಬಾಲಕ
ಈ ಸಂದರ್ಭದಲ್ಲಿ ನಾಗರಾಜು ಎಂಬಾತನಿಗೆ ಗಾಡಿಯ ಮುಂಬದಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಆತನ ಮೇಲೆ ಚಕ್ರ ಹರಿದು ತೀವ್ರವಾಗಿ ಗಾಯಗೊಂಡಿದ್ದಾನೆ. ಕೆಳಗೆ ಬಿದ್ದ ಋತ್ವಿಕ್ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾನೆ. ತಕ್ಷಣ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಋತ್ವಿಕ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನೋಟಿಸ್ ಸ್ವೀಕರಿಸದೇ ಉದ್ಧಟತನ
ಓಟದ ಸ್ಪರ್ಧೆ ಆಯೋಜಿಸಿದ್ದ ಮಧು ಇತರರು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಕಂದಾಯ ನಿರೀಕ್ಷಕರು ಜಾನುವಾರುಗಳಿಗೆ ಗಂಟು ರೋಗ ಇರುವುದರಿಂದ ಸ್ಪರ್ಧೆಯನ್ನು ಮುಂದೂಡುವಂತೆ ನೋಟೀಸ್ ನೀಡಿದ್ದರೂ, ಅದನ್ನು ಸ್ವೀಕರಿಸದೆ ಉದ್ಧಟತನ ತೋರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಅಧಿಕಾರಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ತಿಳಿಸಿ ವಾಪಸ್ಸಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆಯ ನಂತರ ಆಯೋಜಕರು ಪರಾರಿ
ತಲಾ 4 ಸಾವಿರ ರೂಪಾಯಿ ಗಳಂತೆ ಪ್ರವೇಶ ಶುಲ್ಕ ವಸೂಲಿ ಮಾಡಿದ್ದ ಆಯೋಜಕರು, ಬಹುಮಾನವಾಗಿ ಬುಲೆಟ್, ಪಲ್ಸರ್, ಹೋಂಡಾ ಶೈನ್ ಸೇರಿದಂತೆ ಆರು ದ್ವಿಚಕ್ರ ವಾಹನಗಳನ್ನು ಬಹುಮಾನವಾಗಿ ಇಟ್ಟಿದ್ದರು. ಶನಿವಾರದಿಂದಲೇ ಆರಂಭವಾಗಿದ್ದ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಕೆಲವರು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಮಧ್ಯೆ ಮನೆ ಮುಂದೆ ನಿಲ್ಲಿಸಿದ್ದ ಚಿಕ್ಕಮಂಡ್ಯ ಉಮೇಶ್ ಅವರಿಗೆ ಸೇರಿದ ಡಿಸ್ಕವರ್ ಬೈಕ್ ಮೇಲೆ ಎತ್ತಿನ ಗಾಡಿ ಹರಿದು ಜಖಂಗೊಂಡಿತ್ತು. ಆಯೋಜಕರು ಅದಕ್ಕೆ ಪರಿಹಾರ ಕೊಡುವುದಾಗಿಯೂ ಒಪ್ಪಿಕೊಂಡಿದ್ದರು ಎಂದು ಉಮೇಶ್ ತಿಳಿಸಿದ್ದಾರೆ.
ಘಟನೆ ನಂತರ ಆಯೋಜಕರೆಲ್ಲರೂ ಪರಾರಿಯಾಗಿದ್ದಾರೆ. ಇಷ್ಟೆಲ್ಲಾ ಅವಘಡ ನಡೆದಿದ್ದರೂ ಸಹ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಘಟನೆಗೆ ಪೊಲೀಸ್ ಅಧಿಕಾರಿಗಳೇ ನೇರ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications