ಅಧಿಕಾರಿಗಳಿಗೆ ಸಂಸದೆ ಸುಮಲತಾ ನೀಡಿದ ಎಚ್ಚರಿಕೆ ಏನು?
ಮಂಡ್ಯ, ಅಕ್ಟೋಬರ್ 11: ಮಂಡ್ಯ ಲೋಕ ಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಸದೆ ಸುಮಲತಾ ಅಂಬರೀಶ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಧಿಕಾರಿಗಳ ಚಳಿ ಬಿಡಿಸುತ್ತಿರುವುದು ಕಂಡುಬರುತ್ತಿದೆ.
ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವ ಅವರು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಕೆ.ಆರ್.ಪೇಟೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ಒಂದಷ್ಟು ಸಲಹೆ ಮತ್ತೊಂದಷ್ಟು ಎಚ್ಚರಿಕೆಯನ್ನು ನೀಡುವ ಮೂಲಕ ತಾನು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಅಧಿಕಾರಿಗಳು, ಸಾರ್ವಜನಿಕರು ಹಾಗೂ ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು. ಇನ್ನು ಶಿಕ್ಷಣ, ಆರೋಗ್ಯ, ವಿದ್ಯುತ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಅಭಿವೃದ್ಧಿ, ಗ್ರಾಮ ನೈರ್ಮಲ್ಯ, ಕುಡಿಯುವ ನೀರು, ಸಮುದಾಯ ಭವನಗಳ ಅಭಿವೃದ್ಧಿ, ಕೆರೆ ಕಟ್ಟೆಗಳ ಅಭಿವದ್ಧಿಗೆ ಆದ್ಯತೆ ನೀಡಬೇಕು, ನಮ್ಮ ಈ ಹಿಂದಿನ ಸಂಸದರ ನಿಧಿಯಿಂದ ನಡೆಯಬೇಕಾದ ಯೋಜನೆಗಳು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳಿಗೆ ಕೂಡಲೇ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸುವ ಭರವಸೆಯನ್ನು ಕೂಡ ನೀಡಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಗ್ರಾಮೀಣ ಜನರಿಗೆ ತಲುಪುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ನಾನು ಜಿಲ್ಲೆಯ ಜನತೆಯ ಸ್ವಾಭಿಮಾನದ ಪ್ರತಿನಿಧಿಯಾಗಿದ್ದೇನೆ. ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಯು ನನ್ನ ಮೂಲ ಮಂತ್ರ. ನನ್ನ ಮೇಲೆ ಜಿಲ್ಲೆಯ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಸರ್ಕಾರವು ಮಂಡ್ಯ ಜಿಲ್ಲೆಯ ಜನರ ಆಶೋತ್ತರಗಳನ್ನು ಈಡೇರಿಸಲು ಕಂಕಣಬದ್ಧವಾಗಿದೆ. ಇದಕ್ಕೆಲ್ಲ ನನಗೆ ಅಧಿಕಾರಿಗಳ ಸಹಕಾರ ಬಹಳ ಮುಖ್ಯ. ಅಭಿವೃದ್ಧಿ ವಿಚಾರದಲ್ಲಿ ನನ್ನ ಜೊತೆ ಸಹಕರಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳಿಗೆ ನನ್ನ ಜಿಲ್ಲೆಯಲ್ಲಿ ಜಾಗವಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಇದೆಲ್ಲದರ ನಡುವೆ "ನಾನೂ ಯಾವುದೇ ಪಕ್ಷವನ್ನು ಸೇರುವುದಿಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ನೀಡಿದ್ದಾರೆ. ಹಾಗೊಂದು ವೇಳೆ ಯಾವುದಾದರೂ ಪಕ್ಷ ಸೇರಬೇಕಾದರೆ ಮಂಡ್ಯ ಜಿಲ್ಲೆಯ ಜನರ ತೀರ್ಮಾನವನ್ನು ಪಡೆದು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತೇನೆ" ಎಂಬುದಾಗಿ ಹೇಳಿದ್ದಾರೆ. ಈ ಮಾತಿನ ಹಿಂದೆಯೂ ನಿಗೂಢತೆಯಿದ್ದು ಅದೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಸದ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅವರು ಸಂಚಲನ ಸೃಷ್ಟಿಸಿರುವುದಂತೂ ನಿಜ.












Click it and Unblock the Notifications