ರಾಜಕೀಯಕ್ಕೆ ಬರ್ತಾರಾ ಅಭಿಷೇಕ್: ಕುತೂಹಲ ಕೆರಳಿಸಿದ ಸುಮಲತಾ ಅಂಬರೀಶ್ ನಡೆ
ಸಂಸದೆ ಸುಮಲತಾ ಹಾಗೂ ಅಭಿಷೇಶ್ ಅಂಬರೀಷ್ ರಾಜ್ಯ ರಾಜಕಾರಣಕ್ಕೆ ಬರಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸುಮಲತಾ ಅವರು ಬಿಜೆಪಿಯತ್ತ ಮುಖ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಂಡ್ಯ, ಫೆಬ್ರವರಿ 11: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯದ ಪಡಸಾಲೆಗಳಲ್ಲಿ ಹೊಸ, ಹೊಸ ವಿಚಾರಗಳು, ಕುತೂಹಲಗಳು ಗಿರಕಿಹೊಡೆಯಲು ಆರಂಭಿಸಿವೆ. ಕೇಂದ್ರ ರಾಜಕಾರಣಕ್ಕಿಂತ ರಾಜ್ಯ ರಾಜಕೀಯದಲ್ಲಿ ಕೆಲವು ನಾಯಕರಿಗೆ ಹೆಚ್ಚಿನ ಆಸಕ್ತಿ ಬಂದಂತೆ ಕಾಣಿಸುತ್ತಿದೆ. ಇದರ ಜೊತೆ ಜತೆಯಲ್ಲಿಯೇ ಮಂಡ್ಯದತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಅಸ್ತಿತ್ವ ಸಾಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಹವಣಿಸುತ್ತಿದ್ದರೆ, ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬೇಕಾದ ಕಸರತ್ತನ್ನು ಜೆಡಿಎಸ್ ಮಾಡಿಕೊಳ್ಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿ ಪಾರಮ್ಯ ಸಾಧಿಸಿತ್ತು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಜತೆಗೆ ದಳಪತಿಗಳನ್ನು ಮಣಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ಈ ನಡುವೆ ಎಲ್ಲರೂ ಸುಮಲತಾ ಅಂಬರೀಶ್ ಅವರತ್ತ ಕುತೂಹಲದ ನೋಟ ಬೀರುತ್ತಿದ್ದಾರೆ. ಈಗಾಗಲೇ ಸುಮಲತಾ ಆಪ್ತ ಬಣಗಳು ಸದ್ದಿಲ್ಲದೆ ಬಿಜೆಪಿ ಕಡೆಗೆ ಒಲವು ತೋರುತ್ತಿದ್ದು, ಸುಮಲತಾ ಅವರು ಬಿಜೆಪಿಯತ್ತ ಮುಖ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರ ಸುತ್ತಲಿನ ರಾಜಕೀಯದ ಬೆಳವಣಿಗೆಯನ್ನು ಗಮನಿಸಿಕೊಂಡು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಜೆಡಿಎಸ್‌ನಿಂದ ಪಂಚರತ್ನ ಯಾತ್ರೆ, ಜಲಯಾತ್ರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಂಡ್ಯದಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಲ್ಲದೆ, ಸಹಾಯಹಸ್ತವನ್ನು ನೀಡಿದ್ದರು. ಇದು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ಹೀಗಾಗಿ ಜನರು ಜೆಡಿಎಸ್ ನತ್ತ ಒಲವು ತೋರಿದ್ದರು.
ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿಕೊಂಡಿತ್ತಲ್ಲದೆ, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರಗಳನ್ನು ನಡೆಸಿತ್ತು. ಆದರೆ ಈ ಬಾರಿ ಜೆಡಿಎಸ್ ಇಡೀ ರಾಜ್ಯದತ್ತ ಗಮನಹರಿಸಿದ್ದು, ಜಲಯಾತ್ರೆ, ಪಂಚರಥಯಾತ್ರೆಗಳ ಮೂಲಕ ರಾಜ್ಯದಾದ್ಯಂತ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ನಾಯಕರು ಪ್ರವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಅಭಿಷೇಕ್
ಇದೆಲ್ಲ ಕಾರಣದಿಂದ ಕೇವಲ ಹಳೇ ಮೈಸೂರಿತ್ತ ಅದರಲ್ಲೂ ಮಂಡ್ಯದತ್ತ ಹೆಚ್ಚಿನ ನಿಗಾವಹಿಸಲು ದಳಪತಿಗಳಿಗೆ ಸಾಧ್ಯವಾಗದಂತಾಗಿದೆ. ಹೀಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ತಂತ್ರಗಳನ್ನು ಅನುಸರಿಸುತ್ತಿವೆ. ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ಪ್ರಭಾವಿ ನಾಯಕರ ಕೊರತೆ ಎದುರಾಗಿದ್ದು, ಸಂಸದೆ ಸುಮಲತಾ ಮತ್ತು ಅವರ ಪುತ್ರ ಅಭಿಷೇಕ್ ಗೌಡರನ್ನು ರಾಜ್ಯ ರಾಜಕೀಯಕ್ಕೆ ಎಳೆದು ತಂದರೆ ಲಾಭ ಪಡೆದುಕೊಳ್ಳಬಹುದೇನೋ ಎಂಬ ಉದ್ದೇಶವೂ ಅವರದ್ದಾಗಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಪ್ರತ್ಯಕ್ಷವಾಗಿ ಬಿಜೆಪಿಯ ಸಹಕಾರದಿಂದ ಲೋಕಸಭಾ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದ ಸುಮಲತಾ ಅಂಬರೀಶ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ಸುಲಭವಲ್ಲ. ಅವತ್ತಿದ್ದಂತೆ ಇವತ್ತು ಇಲ್ಲ. ಅಂದಿನ ಅನುಕಂಪ ಇಲ್ಲಿ ತನಕ ಉಳಿದಿಲ್ಲ, ಜತೆಗೆ ಈಗ ಅವರನ್ನು ಒಬ್ಬ ರಾಜಕಾರಣಿಯಂತೆಯೇ ಜನ ನೋಡುತ್ತಿರುವುದರಿಂದ ಅವರು ಯಾವುದಾದರೊಂದು ಪಕ್ಷದತ್ತ ಮುಖ ಮಾಡಲೇ ಬೇಕಾಗಿದೆ.

ತಟಸ್ಥರಾಗಿ ಉಳಿಯುತ್ತಾರಾ ಸುಮಲತಾ
ಒಂದು ವೇಳೆ ಸುಮಲತಾ ಅವರು ರಾಜ್ಯ ರಾಜಕೀಯದತ್ತ ಆಸಕ್ತಿ ವಹಿಸದೆ ಮುಂದಿನ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಮಾಡಿದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಸಾಧ್ಯತೆಯಿದೆ. ವಿಧಾಸಭಾ ಚುನಾಣೆಯ ಫಲಿತಾಂಶಗಳನ್ನು ನೋಡಿಕೊಂಡು ಅವರು ಮುಂದಿನ ತೀರ್ಮಾಣನ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯ ರಾಜಕೀಯಕ್ಕೆ ಬರುವುದಾದರೆ ಯಾವುದಾದರೊಂದು ಪಕ್ಷದತ್ತ ವಾಲುವುದು ಅನಿವಾರ್ಯವಾಗಲಿದೆ.

ಸುಮಲತಾ ರಾಜಕೀಯ ನಡೆಯತ್ತ ಬೆಂಬಲಿಗರ ಚಿತ್ತ
ಜೆಡಿಎಸ್ ಅವರಿಗೆ ಬದ್ಧ ವಿರೋಧಿಯಾಗಿದ್ದು, ಅತ್ತ ಅವರು ಆಸಕ್ತಿ ತೋರಲಾರರು, ಕಾಂಗ್ರೆಸ್ ನಾಯಕರಿಗೆ ಅವರನ್ನು ರಾಜ್ಯ ರಾಜಕೀಯಕ್ಕೆ ಎಳೆದು ತರಲು ಆಸಕ್ತಿ ಇಲ್ಲದಾಗಿದೆ. ಆದರೆ ಒಂದು ವೇಳೆ ಲೋಕಸಭಾ ಚುನಾವಣೆಗೆ ಒಪ್ಪಿಗೆ ನೀಡಿದರೂ ಅಚ್ಚರಿಯಿಲ್ಲ. ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸುಮಲತಾ ಅವರು ತಟಸ್ಥವಾಗಿದ್ದುಕೊಂಡೇ ಎಲ್ಲವನ್ನೂ ತೂಗಿ ಅಳೆಯುತ್ತಿದ್ದು, ದಿಢೀರ್ ನಿರ್ಧಾರಕ್ಕೆ ಮುಂದಾಗದೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರಾ..? ಎಂಬ ಅನುಮಾನವಿದೆ.
ಕಳೆದ ಲೋಕಸಭಾ ಚುನಾವಣೆ ನಂತರ ನಡೆದ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೆ ಸುಮಲತಾ ತಟಸ್ಥರಾಗಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ಅವರ ಬೆಂಬಲಿಗರು ಬಿಜೆಪಿಯನ್ನು ಸೇರುತ್ತಿರುವುದನ್ನು ಗಮನಿಸಿದರೆ ಸುಮಲತಾ ಅವರು ತಮ್ಮ ರಾಜಕೀಯ ನಡೆ ಏನು ಎಂಬುದನ್ನು ತಿಳಿಸಲು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದೆನಿಸುತ್ತದೆ. ಆದರೂ ಅವರ ನಿರ್ಧಾರ ಏನಿರರಬಹುದು ಎಂಬ ಪ್ರಶ್ನೆಗೆ ಅವರೇ ಉತ್ತರ ಹೇಳಬೇಕಾಗಿದೆ.












Click it and Unblock the Notifications