Modi Mandya Visit: ಜನರ ಆಕ್ರೋಶ; ರಾತ್ರೋರಾತ್ರಿ ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ ತೆರವು
ಮಂಡ್ಯ, ಮಾರ್ಚ್ 12: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ವೇಳೆ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ನಡೆಸುವ ಮಾರ್ಗದಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಅಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ.
ಮಾರ್ಚ್ 12ರಂದು ಸುಮಾರು 118 ಕಿಲೋ ಮೀಟರ್ ಉದ್ದದ ಬಹುನಿರೀಕ್ಷಿತ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿರುವ ಪ್ರಧಾನಿ ಮೋದಿ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇವರ ಸ್ವಾಗತಕ್ಕೆ ನಿರ್ಮಿಸಿರುವ ಮಹಾದ್ವಾರಗಳಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ಉಂಟಾಗಿತ್ತು. ಇದರ ಬೆನ್ನಲ್ಲೇ ರಾತ್ತೋರಾತ್ರಿ ಹೆಸರು ಬದಲಿಸಲಾಗಿದೆ.

ಸದ್ಯಕ್ಕೆ 'ಉರಿಗೌಡ ಮತ್ತು ದೊಡ್ಡ ನಂಜೇಗೌಡ' ಮಹಾದ್ವಾರವನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಮಹಾದ್ವಾರಕ್ಕೆ ಬಾಲಗಂಗಾಧರ ನಾಥ ಸ್ವಾಮೀಜಿ ಮಹಾದ್ವಾರ ಎಂದು ಹೆಸರಿಡಲಾಗಿದೆ. ಟಿಪ್ಪುವನ್ನು ಕೊಂದವರು ಉರಿಗೌಡ ನಂಜೇಗೌಡ ಎಂಬ ಕಪೋಕಲ್ಪಿತ ಸುಳ್ಳನ್ನು ಜನರ ಮನಸ್ಸಿನಲ್ಲಿ ಬಿಜೆಪಿ ಬಿತ್ತಲು ಯತ್ನಿಸುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಜೊತೆಗೆ ಇದನ್ನು ತೆರವು ಮಾಡದಿದ್ದರೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಈ ಮಹಾದ್ವಾರಕ್ಕೆ ಮಂಡ್ಯ ಜಿಲ್ಲೆ ಸಿರೇದಂತೆ ಹಲವು ಸಾಮಾಜಿ ಹೋರಾಟಗಾರರು ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. "ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ
ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.

"ಉರಿಗೌಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದರು ಎಂದು ಯಾವ ಇತಿಹಾಸದ ದಾಖಲೆಗಳೂ ಹೇಳುವುದಿಲ್ಲ. ಉರಿ ಮತ್ತು ನಂಜು ಎಂಬ ಹೆಸರನ್ನು ಸೃಷ್ಟಿಸಿರುವ ಹಿಂದೆ ಒಕ್ಕಲಿಗ ವಿರೋಧಿ ಮನಸ್ಥಿತಿ ಇರುವುದು ಸ್ಪಷ್ಟ. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಟ ಮಾಡುತ್ತಿರುವಾಗ ಒಕ್ಕಲಿಗರು ಟಿಪ್ಪುವನ್ನು ಕೊಂದರು ಎನ್ನುವ ಮೂಲಕ ಏಕಕಾಲದಲ್ಲಿ ಒಕ್ಕಲಿಗರನ್ನು ದೇಶದ್ರೋಹಿಗಳನ್ನಾಗಿಯೂ, ಕೋಮುವಾದಿಯನ್ನಾಗಿಯೂ ಮಾಡುವ ಕುತಂತ್ರವಲ್ಲದೇ ಇನ್ನೇನೂ ಅಲ್ಲ" ಎಂದು ಪತ್ರಕರ್ತ ನವೀನ್ ಸೂರಿಂಜೆ ಟೀಕಿಸಿದ್ದರು.
"ಪ್ರಧಾನಿಯೊಬ್ಬ ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಲು ಆ ನೆಲದ ವೀರರ ಹೆಸರುಗಳನ್ನು ದ್ವಾರಕ್ಕೆ ಇಡುವುದು ವಾಡಿಕೆ. ಸ್ವಾತಂತ್ರ್ಯ ಪೂರ್ವದ ಹೆಸರುಗಳೇ ಬೇಕಾಗಿದ್ದರೆ "ಶಿವಪುರ ಮಹಾದ್ವಾರ" ಎಂದು ಹೆಸರಿಡಬಹುದಿತ್ತು. ಪ್ರಧಾನಿ ಸ್ವಾಗತ ದ್ವಾರಕ್ಕೆ ಒಕ್ಕಲಿಗ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಬೇಕಾಗಿದ್ದಲ್ಲಿ ಎಚ್ ಕೆ ವೀರಣ್ಣ ಗೌಡ, ಹೆಚ್ ಜಿ ಮಾದೇಗೌಡ, ಎಂ ಜಿ ಬಂಡೀಗೌಡರ ಹೆಸರುಗಳನ್ನು ಇಡಬಹುದಿತ್ತು" ಎಂದು ಹೇಳಿದ್ದರು.
ಸುಮಾರು 118 ಕಿಲೋ ಮೀಟರ್ ಉದ್ದದ ಬಹುನಿರೀಕ್ಷಿತ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿರುವ ಪ್ರಧಾನಿ ಮೋದಿ ಮಂಡ್ಯದಲ್ಲಿ ಮತಬೇಟೆಗೆ ಸಿದ್ಧವಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳ್ನು ಆಯೋಜಿಸಲಾಗಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ಕೂಡ ನಡೆಯಲಿದೆ. 11.20ಕ್ಕೆ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಬಳಿಕ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದೆ. 11.40ಕ್ಕೆ ಹನಕೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಲಿದ್ದಾರೆ.
ಮಂಡ್ಯ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ - ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವರ್ಷ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಆರನೇ ಭೇಟಿ ಇದಾಗಿದೆ. ರಾಜ್ಯದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿ ಹಲವು ರಣತಂತ್ರಗಳನ್ನು ಹೂಡುತ್ತಿದೆ.












Click it and Unblock the Notifications